Thu. Sep 24th, 2026

ಮತದಾರರ ಗಮನಕ್ಕೆ: ನಿಮ್ಮ ಹೆಸರು ಪಟ್ಟಿಯಲ್ಲಿಲ್ಲವೇ? ತಕ್ಷಣವೇ ‘ಫಾರ್ಮ್ 6’ ಸಲ್ಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕರೆ

Share this with Friends

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)-2026 ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಹಕ್ಕುಗಳು ಮತ್ತು ಆಕ್ಷೇಪಣೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಬಿಎ ಪ್ರಧಾನ ಕಚೇರಿಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ನಾಗರಿಕರು ಹಾಗೂ ತಿದ್ದುಪಡಿ ಬಯಸುವವರು ನಿಯಮಾನುಸಾರ ಅರ್ಜಿ ಸಲ್ಲಿಸಲು ಕೋರಿದರು.

ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಪ್ರಮುಖ ಮಾಹಿತಿ:

ಫಾರ್ಮ್ 6 (Form 6): ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ (Draft Electoral Roll) ನಿಮ್ಮ ಹೆಸರು ಕೈಬಿಟ್ಟು ಹೋಗಿದ್ದರೆ, ಹೊಸದಾಗಿ ಹೆಸರು ಸೇರಿಸಲು ಕಡ್ಡಾಯವಾಗಿ ‘ಫಾರ್ಮ್ 6’ ಅನ್ನು ಸಲ್ಲಿಸಬೇಕು.

ಫಾರ್ಮ್ 8 (Form 8): ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿದ್ದು, ಅದರಲ್ಲಿ ವಿಳಾಸ, ವಯಸ್ಸು, ತಂದೆಯ ಹೆಸರು ಅಥವಾ ಇತರೆ ಯಾವುದೇ ತಪ್ಪುಗಳಿದ್ದಲ್ಲಿ ಅವುಗಳ ತಿದ್ದುಪಡಿಗಾಗಿ ‘ಫಾರ್ಮ್ 8’ ಅನ್ನು ಬಳಸಬೇಕು.

ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ:

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಟ್ಟು ಸಲ್ಲಿಕೆಯಾಗಿದ್ದ 24,07,218 ಪ್ರಕರಣಗಳ ಪೈಕಿ ಈವರೆಗೆ 13,40,663 ಪ್ರಕರಣಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗಿದೆ. ಸದ್ಯ ಸುಮಾರು 2,56,935 ಪ್ರಕರಣಗಳು ಮಾತ್ರ ಬಾಕಿ ಉಳಿದಿದ್ದು, ನೈಜವಾಗಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ, ವಿಚಾರಣೆ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮೊಬೈಲ್ ಮೂಲಕ ಮತದಾರರಿಗೆ ಮಾಹಿತಿ ಮತ್ತು ವಿಶೇಷ ಶಿಬಿರಗಳು:

ಮತದಾರರ ದತ್ತಾಂಶದಲ್ಲಿ ಲಭ್ಯವಿರುವ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು, ವಿಚಾರಣೆ (Hearing) ಮತ್ತು ಪರಿಶೀಲನೆಯ ದಿನಾಂಕದ ಮಾಹಿತಿಯನ್ನು ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ (WhatsApp) ಮೂಲಕ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಧ್ಯವಿರುವ ಕಡೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಸಂಪರ್ಕ ವಿವರಗಳನ್ನೂ ಒದಗಿಸಲಾಗುವುದು.

ಹೆಚ್ಚಿನ ಸಂಖ್ಯೆಯ ವಿಚಾರಣೆಗಳು ಬಾಕಿ ಇರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಿಶೇಷ ಶಿಬಿರಗಳನ್ನು (Special Camps) ಆಯೋಜಿಸಲು ಹಾಗೂ ಸಿಬ್ಬಂದಿ ಕೊರತೆ ಇರುವ ಸೂಕ್ಷ್ಮ ಪ್ರದೇಶಗಳಿಗೆ ಮೈಕ್ರೋ ಪ್ಲಾನ್ ಸಿದ್ಧಪಡಿಸಿ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಸಾರ್ವಜನಿಕರು ಯಾವುದೇ ಗೊಂದಲಗಳಿದ್ದಲ್ಲಿ ಉಚಿತ ಮತದಾರರ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಬಹುದಾಗಿದೆ ಎಂದರು.

 

 


Share this with Friends

Related Post