ಚಿತ್ರದುರ್ಗ: “ಭದ್ರಾ ನದಿ ನೀರು ಹರಿಸುವ ಮೂಲಕ ಚಿತ್ರದುರ್ಗ ಜಿಲ್ಲೆಯ ಜನರ ಬದುಕನ್ನು ಸುಭದ್ರ ಮಾಡಿದ್ದೇವೆ. ಬಯಲುಸೀಮೆಯ ಈ ಭಾಗಕ್ಕೆ ಭದ್ರಾ ನದಿ ಹರಿಸಬೇಕೆಂಬ 60 ವರ್ಷಗಳ ಸುದೀರ್ಘ ಕನಸನ್ನು ನಮ್ಮ ಸರ್ಕಾರ ನನಸು ಮಾಡಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಗುರುವಾರ ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭೂಮಿ ಮತ್ತು ನೀರಿನ ಹೊಸ ಗ್ಯಾರಂಟಿ:
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ಜನತೆಗೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಇವುಗಳ ಜೊತೆಗೆ ಈಗ ರೈತರಿಗಾಗಿ ಭೂಮಿ ಹಾಗೂ ನೀರಿನ ಹೊಸ ಗ್ಯಾರಂಟಿಯನ್ನು ನಾವು ನೀಡುತ್ತಿದ್ದೇವೆ. ಕೆರೆಗಳನ್ನು ತುಂಬಿಸುವ ಸಂಕಲ್ಪವನ್ನು ನಾನು ಮಾಡಿದ್ದೇನೆ. ಕ್ಷೇತ್ರದ ಶಾಸಕರಾದ ವೀರೇಂದ್ರ ಪಪ್ಪಿ, ಗೋವಿಂದಪ್ಪ ಹಾಗೂ ಗೋಪಾಲಕೃಷ್ಣ ಅವರ ಬೇಡಿಕೆಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದ್ದು, ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾನು ಈಗಲೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ” ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ:
ಭದ್ರ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, “ಹಿಂದೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದಾಗ ಕೇಂದ್ರ ಹಾಗೂ ರಾಜ್ಯ ಬಜೆಟ್ನಲ್ಲಿ ಭದ್ರಾ ಯೋಜನೆಗೆ 5,400 ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಆದರೆ ಬೊಮ್ಮಾಯಿ, ಕಾರಜೋಳ, ಅಶೋಕ್ ಅಥವಾ ವಿಜಯೇಂದ್ರ ಅವರಿಗೆ ಕೇಂದ್ರದಿಂದ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಲು ಸಾಧ್ಯವಾಗಲಿಲ್ಲ. ನುಡಿದಂತೆ ನಡೆಯದ ಬಿಜೆಪಿ ನಾಯಕರಿಗೆ ತಾವು ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಯಾವುದೇ ಹಕ್ಕಿಲ್ಲ” ಎಂದು ಕಿಡಿಕಾರಿದರು.
“ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯಂತಹ ಗಂಭೀರ ವಿಷಯಗಳ ಚರ್ಚೆಯಲ್ಲಿ ಬಿಜೆಪಿಗೆ ಬದ್ಧತೆ ಇಲ್ಲ. ಮಾಜಿ ಸಚಿವ ನಾಗೇಂದ್ರ ಅವರು ಯಾವುದೇ ತಪ್ಪು ಮಾಡದಿದ್ದರೂ ನೈತಿಕ ಹೊಣೆ ಹೊತ್ತು ಅವರಿಂದ ರಾಜೀನಾಮೆ ಪಡೆದೆವು. ಆದರೂ ಬಿಜೆಪಿ ನಾಯಕರು ಕೇವಲ ನೀಚ ರಾಜಕಾರಣಕ್ಕಾಗಿ ಯಾತ್ರೆಗಳನ್ನು ಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ಸಂಘರ್ಷಕ್ಕೆ ಹೆದರುವುದಿಲ್ಲ:
“ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇತಿಹಾಸ ಹೊಂದಿರುವ ಪಕ್ಷವಾಗಿದೆ. ನಮ್ಮ 100 ದಿನಗಳ ಆಡಳಿತದಲ್ಲೇ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಜನ ಗಮನಿಸಿದ್ದಾರೆ. ರಾಜಕೀಯ ಸಂಘರ್ಷದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಕಾರಣಕ್ಕೆ ನಾನು ಹೃದಯ ಶ್ರೀಮಂತಿಕೆಯಿಂದ ವಿರೋಧ ಪಕ್ಷದವರನ್ನೂ ಒಟ್ಟಾಗಿ ಕರೆದೊಯ್ಯಲು ಮುಂದಾಗಿದ್ದೆ. ಆದರೆ ಸಂಘರ್ಷಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಎಂದಿಗೂ ಹೆದರುವುದಿಲ್ಲ. ರೈತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ” ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ದಿ. ಡಿ. ಸುಧಾಕರ್ ಸ್ಮರಣೆ – ಭದ್ರಾ ಯೋಜನೆಗೆ ಹೆಸರು ಇಡುವ ಪ್ರಸ್ತಾಪ:
ತಮ್ಮ ಆಪ್ತ ಮಿತ್ರ, ದಿವಂಗತ ನಾಯಕ ಡಿ. ಸುಧಾಕರ್ ಅವರನ್ನು ನೆನೆದು ಭಾವುಕರಾದ ಸಿಎಂ, “ನನ್ನ ಆತ್ಮೀಯ ಮಿತ್ರ ಸುಧಾಕರ್ ಇಂದು ನಮ್ಮ ಜತೆಗಿಲ್ಲ. ಅವರು ಬದುಕಿದ್ದಿದ್ದರೆ ನನಗೆ ಆನೆ ಬಲ ಇರುತ್ತಿತ್ತು. ‘ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ನೀನು ಮುಖ್ಯಮಂತ್ರಿಯಾಗಬೇಕು’ ಎಂದು ಅವರು ಸದಾ ಆಶಿಸುತ್ತಿದ್ದರು. ಅವರ ಸ್ಥಾನವನ್ನು ಈಗ ರಘುಮೂರ್ತಿ ವಹಿಸಿಕೊಂಡಿದ್ದಾರೆ. ಸುಧಾಕರ್ ಅವರ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದ್ದು, ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧಿಸುವ ಅಭ್ಯರ್ಥಿಯನ್ನು ಸಾರ್ವಜನಿಕರು ಬೆಂಬಲಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯ ಒಂದು ಭಾಗಕ್ಕೆ ಸುಧಾಕರ್ ಅವರ ಹೆಸರಿಡಬೇಕು ಎಂಬ ಬೇಡಿಕೆ ನಮ್ಮ ಮುಂದಿದ್ದು, ಅವರ ಕನಸುಗಳನ್ನು ನನಸು ಮಾಡುವ ಮೂಲಕ ಚಿತ್ರದುರ್ಗದ ಜನರ ಋಣ ತೀರಿಸುತ್ತೇವೆ,” ಎಂದರು.
ರೈತರಿಗಾಗಿ ಹೊಸದಾಗಿ 4-5 ಯೋಜನೆಗಳ ಘೋಷಣೆ:
ಕಳೆದ ನೂರು ದಿನಗಳ ಆಡಳಿತದಲ್ಲಿ ರೈತರಿಗಾಗಿ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿರುವುದಾಗಿ ಸಿಎಂ ವಿವರಿಸಿದರು:
ತೇಗದ ಸಿರಿ ಯೋಜನೆ: ಸಣ್ಣ ಮತ್ತು ಅತ್ಯಂತ ಸಣ್ಣ ರೈತರ ಆರ್ಥಿಕ ಭದ್ರತೆಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.
ಉಚಿತ ಹೊಲ ಉಳುಮೆ ಯೋಜನೆ: ಬಡ ರೈತರಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರದ ವತಿಯಿಂದಲೇ ಹೊಲ ಉಳುಮೆ ಮಾಡಿಕೊಡಲಾಗುವುದು.
ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ: ಕೃಷಿ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ವಿಶೇಷ ಉತ್ತೇಜನ ನೀಡುವ ಯೋಜನೆ ಇದಾಗಿದೆ.
ಉಚಿತ ವಿದ್ಯುತ್ ಸಬ್ಸಿಡಿ: ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಒದಗಿಸಲು ಸರ್ಕಾರ ಬರೋಬ್ಬರಿ 24 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ಬಿಜೆಪಿಗೆ ತಕ್ಕ ಉತ್ತರ ನೀಡಿ:
“ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಉಳುವವನಿಗೆ ಭೂಮಿ ಹಕ್ಕು ಮತ್ತು ಅರಣ್ಯ ಹಕ್ಕು ಕೊಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಯಡಿಯೂರಪ್ಪ ಅವರ ಅವಧಿಯಲ್ಲಿ ಕೇವಲ ಸೈಕಲ್ ಹಾಗೂ ಸೀರೆ ವಿತರಿಸಿದ್ದನ್ನು ಬಿಟ್ಟರೆ ರೈತರ ಬದುಕಿನಲ್ಲಿ ಬದಲಾವಣೆ ತರುವ ಯಾವುದೇ ದೂರದೃಷ್ಟಿಯ ಕಾರ್ಯಕ್ರಮಗಳನ್ನು ನೀಡಲಿಲ್ಲ. ಇಂತಹ ನಾಯಕರಿಗೆ ಸಾರ್ವಜನಿಕರೇ ತಕ್ಕ ಉತ್ತರ ನೀಡಬೇಕು. ರಾಜ್ಯದ ಪಾಲಿನ ಒಂದೇ ಒಂದು ಹನಿ ನೀರೂ ಸಹ ಬೇರೆಯವರ ಪಾಲಾಗದಂತೆ ನದಿ ಜೋಡಣೆ, ತುಂಗಾಭದ್ರಾ, ಕೃಷ್ಣಾ ಮತ್ತು ಮಹದಾಯಿ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ನಮ್ಮ ರೈತರ ಉದ್ದಾರಕ್ಕಾಗಿ ಬಳಸಿಕೊಳ್ಳುತ್ತೇವೆ,” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

