Sat. Sep 26th, 2026

ಧಮ್ ಇದ್ದರೆ ನನ್ನನ್ನು ಬಂಧಿಸಲಿ, ವೋಟ್ ಕಳ್ಳತನದ ವಿರುದ್ಧ ಹೋರಾಟ ನಿಲ್ಲದು: ಕೇಂದ್ರ ಸರ್ಕಾರಕ್ಕೆ ನಟ ಪ್ರಕಾಶ್ ರಾಜ್ ಬಹಿರಂಗ ಸವಾಲು

Share this with Friends

ತುಮಕೂರು: “ಕಳೆದ 12-13 ವರ್ಷಗಳಿಂದ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದೇನೆ. ನನ್ನ ಮೇಲೆ ಯಾವುದೇ ರೀತಿಯ ಅಕ್ರಮ ಅಥವಾ ನೂರಾರು ಕೋಟಿ ಹಗರಣಗಳ ಕಪ್ಪು ಚುಕ್ಕೆ ಇಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಇಷ್ಟೊತ್ತಿಗಾಗಲೇ ತನಿಖಾ ಸಂಸ್ಥೆಗಳನ್ನು ಬಿಟ್ಟು ನನ್ನನ್ನು ಜೈಲಿಗೆ ಹಾಕಬೇಕಿತ್ತು. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಧಮ್ ಇದ್ದರೆ ನನ್ನನ್ನು ಬಂಧಿಸಲಿ,” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಬಹಿರಂಗ ಸವಾಲು ಹಾಕಿದ್ದಾರೆ.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರುದ್ಧ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜಾಗೃತಿ ಪ್ರವಾಸದ ಅಂಗವಾಗಿ ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ:

ಕೇಂದ್ರ ಚುನಾವಣಾ ಆಯೋಗದ ಇತ್ತೀಚಿನ ನಡವಳಿಕೆಗಳು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ದೇಶಾದ್ಯಂತ ಲಕ್ಷಾಂತರ ಅರ್ಹ ಮತದಾರರ, ಅದರಲ್ಲೂ ಪ್ರಮುಖವಾಗಿ ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ದೊಡ್ಡ ವೋಟ್ ಕಳ್ಳತನದ ಹುನ್ನಾರವಾಗಿದ್ದು, ಈ ಕೂಡಲೇ ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬಾಗೇಪಲ್ಲಿಯಲ್ಲಿ ಜಾಗೃತಿ ಸಮಾವೇಶ:

ಇದೇ ವೇಳೆ ಮಾತನಾಡಿದ ಅವರು, ಈ ದೇಶದ ಸಂವಿಧಾನ ಮತ್ತು ಪ್ರಜೆಗಳ ಮತದಾನದ ಹಕ್ಕನ್ನು ರಕ್ಷಿಸಲು ತಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವುದಾಗಿ ಪ್ರಕಟಿಸಿದರು. ಚುನಾವಣಾ ಆಯೋಗವು ಕೇವಲ ಒಂದು ರಾಜಕೀಯ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಮತದಾರರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ತಾವು ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು. ತುಮಕೂರಿನ ಸುದ್ದಿಗೋಷ್ಠಿಯ ಬಳಿಕ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ನಿರ್ಗಮಿಸಿದರು. ರಾಜಕೀಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಇವರ ಈ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

 

 


Share this with Friends

Related Post