Sat. Sep 26th, 2026

ಹಾಲಿನ ದರ ಏರಿಕೆ ಪ್ರಸ್ತಾವನೆ,ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

Share this with Friends

ಬೆಂಗಳೂರು : “ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್ ಬಳಿ ಶನಿವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಾಲಿನ ದರ ಪರಿಷ್ಕರಣೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಸರ್ಕಾರದ ಮುಂದಿನ ನಡೆಯನ್ನು ಹಂಚಿಕೊಂಡರು.

ನೆರೆರಾಜ್ಯಗಳ ದರ ಪರಿಶೀಲನೆ:

“ರಾಜ್ಯದ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಇತ್ತೀಚೆಗೆ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಪ್ರತಿ ಲೀಟರ್ ಹಾಲಿನ ದರವನ್ನು 12 ರೂಪಾಯಿಗಳಷ್ಟು ಹೆಚ್ಚಿಸಬೇಕು ಮತ್ತು ಅದರಲ್ಲಿ 2 ರೂಪಾಯಿಗಳನ್ನು ನೇರವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡಬೇಕು ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಹಾಲಿನ ದರ ಮತ್ತು ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ಸಮಗ್ರ ವರದಿಯನ್ನು ತರಿಸಿಕೊಳ್ಳಲಾಗುತ್ತಿದೆ. ಈ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ವಿವರಿಸಿದರು.

ರೈತರ ರಕ್ಷಣೆಗೆ ಸರ್ಕಾರ ಬದ್ಧ:

ಪ್ರಸ್ತುತ ಮಾರುಕಟ್ಟೆ ದರದಿಂದಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಈ ಕಾರಣದಿಂದಾಗಿ ಹೈನುಗಾರಿಕೆ ನಂಬಿರುವ ರೈತರಲ್ಲಿ ತೀವ್ರ ಆಕ್ರೋಶ ಮೂಡಿದೆ. ಈಗಾಗಲೇ ಸುಮಾರು 50 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರು ದರ ಏರಿಕೆ ಮಾಡುವಂತೆ ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಂಕಷ್ಟದಲ್ಲಿರುವ ಅನ್ನದಾತರನ್ನು ಹಾಗೂ ಹಾಲು ಒಕ್ಕೂಟಗಳನ್ನು ಆರ್ಥಿಕ ನಷ್ಟದಿಂದ ರಕ್ಷಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೂ ಹೊರೆಯಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

 

 


Share this with Friends

Related Post