Sun. Sep 27th, 2026

ಬೆಂಗಳೂರಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ 75ನೇ ಜನ್ಮದಿನದ ‘ಅಮೃತ ಮಹೋತ್ಸವ’ದ ಭವ್ಯ ಸಂಭ್ರಮ

Share this with Friends

ಬೆಂಗಳೂರು: ಕನ್ನಡದ ಹೆಮ್ಮೆಯ ನಟ, ‘ಕರ್ನಾಟಕ ರತ್ನ’ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷಾಚರಣೆಯ ಪ್ರಯುಕ್ತ ರಾಜಧಾನಿಯಲ್ಲಿ ಭಾನುವಾರ ಇಡೀ ದಿನ ಬರೋಬ್ಬರಿ 18 ಗಂಟೆಗಳ ಕಾಲ ‘ವಿಷ್ಣು ಹಬ್ಬ’ವನ್ನು ಆಚರಿಸಲಾಯಿತು.

ಭವ್ಯ ಕನ್ನಡ ಧ್ವಜ ಮೆರವಣಿಗೆ:

ಅಮೃತ ಮಹೋತ್ಸವದ ಅಂಗವಾಗಿ ಮುಂಜಾನೆ 6:00 ಗಂಟೆಗೆ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುಮಾರು 2 ಸಾವಿರಕ್ಕೂ ಅಧಿಕ ಅಭಿಮಾನಿಗಳು ಒಟ್ಟಾಗಿ 1.5 ಕಿಲೋಮೀಟರ್ ಉದ್ದದ ದೈತ್ಯ ಕನ್ನಡ ಧ್ವಜವನ್ನು ಹಿಡಿದು ಸಾಗಿದ ದೃಶ್ಯ ರೋಮಾಂಚನಕಾರಿಯಾಗಿ ಮೂಡಿಬಂದಿತು. ಮೈದಾನದಲ್ಲಿ ವಿಷ್ಣು ಅವರ 25 ಅಡಿ ಎತ್ತರದ ಬೃಹತ್ ಕಟೌಟ್ ಅಳವಡಿಸಲಾಗಿದ್ದು ಕಣ್ಮನ ಸೆಳೆಯಿತು.

ಚಿತ್ರರಂಗದ ಗಣ್ಯರ ಸಮಾಗಮ:

ಬೆಳಗ್ಗೆ 9:30ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ನಟರಾದ ಶ್ರೀನಾಥ್, ರಮೇಶ್ ಅರವಿಂದ್, ಜಯಮಾಲಾ, ಶ್ರುತಿ, ಅವಿನಾಶ್, ಮಾಳವಿಕಾ ಅವಿನಾಶ್, ನಿರ್ದೇಶಕ ಎಸ್. ನಾರಾಯಣ್ ಹಾಗೂ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಚಿತ್ರರಂಗದ ಪ್ರಮುಖರು ಜ್ಯೋತಿ ಬೆಳಗಿಸಿದರು. ನಟ ರವಿಚಂದ್ರನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಭಾಗವಹಿಸಿ ತಮ್ಮ ಪ್ರೀತಿಯ ‘ವಿಷ್ಣು ಮಾಮ’ನೊಂದಿಗಿನ ಒಡನಾಟದ ನೆನಪುಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಸಾಂಸ್ಕೃತಿಕ ವೈಭವ ಮತ್ತು ಗಾನ ಗೌರವ:

ಸಂಜೆ ನಡೆದ ಸಾಂಸ್ಕೃತಿಕ ಸೌರಭದಲ್ಲಿ ಕನ್ನಡದ ಹೆಸರಾಂತ ಗಾಯಕರು ಸಾಹಸಸಿಂಹನ ಚಿತ್ರಗಳ ಸದಾ ಹಸಿರು ಗೀತೆಗಳನ್ನು ಹಾಡುವ ಮೂಲಕ ‘ಗಾನ ಗೌರವ’ ಸಮರ್ಪಿಸಿದರು. ನಟರಾದ ಶಿವರಾಜ್‌ಕುಮಾರ್ ಮತ್ತು ಶ್ರೀಮುರಳಿ ಅವರು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರಗಳ ಗೀತೆಗಳನ್ನು ಹಾಡಿ, ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಸಹಸ್ರಾರು ಅಭಿಮಾನಿಗಳನ್ನು ರಂಜಿಸಿದರು. ಇಡೀ ಮೈದಾನವು ಸಾಹಸಸಿಂಹನ ಅಭಿಮಾನಿಗಳಿಂದ ತುಂಬಿ ಹೋಗಿದ್ದು, ಜೈಕಾರಗಳ ಧ್ವನಿ ಮೊಳಗಿತು. ಮಧ್ಯರಾತ್ರಿ 12:00 ಗಂಟೆಯವರೆಗೂ ಆಕರ್ಷಕ ಲೇಸರ್ ಶೋ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಮೃತ ಮಹೋತ್ಸವಕ್ಕೆ ಅತ್ಯಂತ ಅದ್ಧೂರಿ ತೆರೆ ಬೀಳಲಿದೆ.

 


Share this with Friends

Related Post