ಬೆಂಗಳೂರು: “ತಮಗೆ ಗೆಲುವು ಸಿಕ್ಕರೆ ಚುನಾವಣಾ ಆಯೋಗ ಒಳ್ಳೆಯದು, ಸೋತರೆ ಆಯೋಗವೇ ವಿಲನ್ ಎನ್ನುವುದು ಕಾಂಗ್ರೆಸ್‌ನ ಇಬ್ಬಂದಿ ನಿಲುವು. ಇಷ್ಟೊಂದು ಅಪನಂಬಿಕೆ ಇದ್ದರೆ ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಲ್ಲೆಲ್ಲಾ ಚುನಾವಣೆ ರದ್ದುಪಡಿಸಿ, ಧೈರ್ಯವಿದ್ದರೆ ಮರು ಚುನಾವಣೆ ಎದುರಿಸಲಿ” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಸೇರಿದಂತೆ ಎಲ್ಲಾ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸೋಲಿನ ಭೀತಿಯಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ:
ಮುಂದಿನ ದಿನಗಳಲ್ಲಿ ತಮಗೆ ಗೆಲುವು ಸಿಗುವುದಿಲ್ಲ ಎಂಬ ತೀವ್ರ ಭ್ರಮನಿರಸನದಿಂದ ರಾಹುಲ್ ಗಾಂಧಿ ಸೇರಿದಂತೆ ಆ ಪಕ್ಷದ ನಾಯಕರು ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೆ ಇವಿಎಂ (EVM) ಯಂತ್ರಗಳನ್ನು ‘ಬ್ಲಾಕ್ ಬಾಕ್ಸ್’ ಎಂದು ಕರೆದಿದ್ದ ರಾಹುಲ್ ಗಾಂಧಿ, ಆ ತಂತ್ರಜ್ಞಾನವನ್ನು ದೇಶಕ್ಕೆ ತಂದ ತಮ್ಮ ತಂದೆ ರಾಜೀವ್ ಗಾಂಧಿ ಅವರ ದೂರದೃಷ್ಟಿಯನ್ನೇ ಪ್ರಶ್ನಿಸಿದಂತಾಗಿದೆ. ನೆಹರು ಮತ್ತು ಇಂದಿರಾಗಾಂಧಿ ಅವರ ಕಾಲದಲ್ಲಿ ತಮ್ಮ ಮನೆಯಲ್ಲಿ ಚಾಕರಿ ಮಾಡುವವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುತ್ತಿದ್ದ ಇತಿಹಾಸ ಕಾಂಗ್ರೆಸ್ಸಿಗರಿಗಿದೆ. ಈಗ ಚುನಾವಣಾ ಆಯೋಗದ ಮೂವರು ಹಿರಿಯ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದರೂ, ರಾಜಕೀಯ ಲಾಭಕ್ಕಾಗಿ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಳುಗುವ ಹಡಗು ಕಾಂಗ್ರೆಸ್; ರಾಜ್ಯದಲ್ಲಿ ದಿವಾಳಿ ಸರ್ಕಾರ:
ಮುಂದಿನ ಯಾವುದೇ ಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ಗೆಲುವಿನ ನಿರೀಕ್ಷೆಯಿಲ್ಲ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಒಂದು ಸ್ಥಾನವೂ ಗೆಲ್ಲಲ್ಲ ಎಂಬುದು ಅವರಿಗೆ ಖಾತರಿಯಾಗಿದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೇ ಕಾಂಗ್ರೆಸ್ ಅನ್ನು ದೂರ ತಳ್ಳಿದ್ದಾರೆ. ಹೀಗಾಗಿ, ಸೋಲಿಗೆ ಮುಂಚಿತವಾಗಿಯೇ ‘ನಿರೀಕ್ಷಣಾ ಜಾಮೀನು’ ಪಡೆಯುವಂತೆ ಕಾಂಗ್ರೆಸ್ ರ‍್ಯಾಲಿಗಳನ್ನು ಹಮ್ಮಿಕೊಳ್ಳುತ್ತಿದೆ.
ಮತ್ತೊಂದೆಡೆ ಕರ್ನಾಟಕದಲ್ಲಿ ಆರ್ಥಿಕ ಇಲಾಖೆ ಸಂಪೂರ್ಣ ದಿವಾಳಿಯಾಗಿದೆ. ಶಾಲಾ ಮಕ್ಕಳಿಗೆ ಕಿತ್ತುಹೋದ ಶೂಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಸಂಚು ರೂಪಿಸುತ್ತಿದ್ದು, ಸ್ವತಃ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಆರ್ಥಿಕ ಇಲಾಖೆಗೆ ‘ದಿವಾಳಿ ಇಲಾಖೆ’ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಲೇವಡಿ ಮಾಡಿದರು.
ರೈತರ ಪರ ಹೋರಾಟಕ್ಕೆ ಸಿದ್ಧ:
ಕೆಪಿಎಸ್‌ಸಿ ಅಕ್ರಮದ ತನಿಖೆಗಾಗಿ ಹೈಕೋರ್ಟ್ ನಿರ್ದೇಶನದಂತೆ ಎಸ್‌ಐಟಿ ರಚನೆಯಾಗಿದ್ದರೂ, ಅದನ್ನೂ ಕಾಂಗ್ರೆಸ್ ನಾಯಕರು ಆಕ್ಷೇಪಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಮತ್ತು ಬಿಡದಿ ರೈತರ ಭೂಸ್ವಾಧೀನ ವಿಚಾರವಾಗಿ ಮಾತನಾಡಿದ ಅವರು, ರೈತರಿಗೆ ದ್ರೋಹ ಬಗೆಯುತ್ತಿರುವ ಈ ಯೋಜನೆಯನ್ನು ಜಾರಿಗೊಳಿಸಲು ನಾವು ಬಿಡುವುದಿಲ್ಲ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಇದನ್ನು ರದ್ದುಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

