Sun. Sep 27th, 2026

ವೀರಶೈವ ಲಿಂಗಾಯತರು ಇಡೀ ಸಮಾಜವನ್ನು ಒಗ್ಗೂಡಿಸಬೇಕು; ಸಿಎಂ ಡಿ.ಕೆ. ಶಿವಕುಮಾರ್ ಕರೆ

Share this with Friends

ಬೆಂಗಳೂರು: “ಜಗತ್ತಿಗೆ ಪ್ರಜಾಪ್ರಭುತ್ವದ ಆಶಯ ಹಾಗೂ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿದವರು ಜಗದ್ಗುರು ಬಸವಣ್ಣನವರು. ಇಂತಹ ಉನ್ನತ ಸಿದ್ಧಾಂತ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವು ಕೇವಲ ತಮ್ಮೊಳಗೇ ಒಗ್ಗಟ್ಟಾಗಿದ್ದರೆ ಸಾಲದು, ಇಡೀ ರಾಜ್ಯದ ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿ ಮುನ್ನಡೆಸಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಲಾಗಿದ್ದ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.

ಬಸವ ಪಥದಲ್ಲಿ ಸರ್ಕಾರ; ಭಕ್ತರ ಭವನಕ್ಕೆ ಜಾಗದ ಕೊಡುಗೆ:

ರಾಜ್ಯದ ಲಿಂಗಾಯತ ಮಠಗಳು ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ಧರ್ಮದ ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ನೀಡುತ್ತಿರುವುದನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದು ನಮ್ಮದೇ ಸರ್ಕಾರ ಎಂದರು. ಇದೇ ವೇಳೆ ಮಠಾಧೀಶರು ಹಾಗೂ ಹೊರಗಿನಿಂದ ಬರುವ ಭಕ್ತರ ವಾಸ್ತವ್ಯಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗವನ್ನು ನೀಡುವುದಾಗಿ ಪ್ರಕಟಿಸಿದ ಸಿಎಂ, “ಜಾಗ ನಮ್ಮದು, ಕಟ್ಟಡ ನಿಮ್ಮದು. ಇದಕ್ಕೆ ವೀರಗಂಗಾಧರ ಶಿವಕುಮಾರ್ ಸ್ವಾಮೀಜಿ ಅಥವಾ ನಿಮ್ಮಿಷ್ಟದ ಹೆಸರನ್ನು ಇಟ್ಟುಕೊಳ್ಳಿ” ಎಂದು ತಿಳಿಸಿದರು.

ನನ್ನ ಅರಿವಿನ ಗುರು ವೀರಗಂಗಾಧರ ಅಜ್ಜಯ್ಯ:

ತಮ್ಮ ವೈಯಕ್ತಿಕ ಜೀವನದ ಭಕ್ತಿಯ ಇತಿಹಾಸವನ್ನು ಹಂಚಿಕೊಂಡ ಸಿಎಂ, “ನಾನು ಹುಟ್ಟಿನಿಂದ ಒಕ್ಕಲಿಗನಾಗಿದ್ದರೂ ನನಗೆ ಜ್ಞಾನದ ಅರಿವು ಕೊಟ್ಟವರು ಸಿದ್ಧಗಂಗಾ ಮಠದ ವೀರಗಂಗಾಧರ ಅಜ್ಜಯ್ಯನವರು. ನಾನು ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ರಾಷ್ಟ್ರ ಮಟ್ಟದಲ್ಲಿ ಟೀಕೆಗಳು ಎದುರಾಗಿದ್ದವು. ಆದರೆ ನಂಬಿಕೆಯೇ ಮನುಷ್ಯನ ಬೇರು. ನಾನು ಯಾವುದೇ ಪ್ರಚಾರಕ್ಕಾಗಿ ನನ್ನ ಅಜ್ಜನ ಹೆಸರನ್ನು ಬಳಸುವುದಿಲ್ಲ. ಬಸವಣ್ಣನವರ ಹಾದಿಯಲ್ಲೇ ನಾನು ಪ್ರಜಾಸೇವಕನಾಗಿ ಮುನ್ನಡೆಯುತ್ತಿದ್ದೇನೆ” ಎಂದು ಭಾವುಕರಾದರು.

ಸೇವೆ ಮಾಡುವವರನ್ನು ಇತಿಹಾಸ ನೆನಪಿಸಿಕೊಳ್ಳುತ್ತದೆ:

ಇತಿಹಾಸ ಮತ್ತು ಪುರಾಣಗಳ ಉದಾಹರಣೆ ನೀಡಿದ ಡಿ.ಕೆ. ಶಿವಕುಮಾರ್, “ರಾಮನ ತಂದೆ ದಶರಥನಿಗೆ ದೇವಾಲಯಗಳಿಲ್ಲ, ಆದರೆ ಸೇವಕನಾಗಿದ್ದ ಹನುಮಂತನ ಗುಡಿಗಳು ದೇಶದ ಮೂಲೆ ಮೂಲೆಗಳಲ್ಲಿವೆ. ಏಕೆಂದರೆ ಈ ಸಮಾಜವು ದರ್ಪ ತೋರ್ಪಡಿಸುವವರಿಗಿಂತ ಪ್ರಾಮಾಣಿಕವಾಗಿ ಸೇವೆ ಮಾಡುವವರನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಭಕ್ತಿಯೇ ಜಾತಿ, ಕರ್ಮವೇ ಧರ್ಮ ಎಂದು ಸಾರಿದ ವೀರಶೈವ ಸಮಾಜದಿಂದ ಇಡೀ ರಾಜ್ಯ ಸುಭಿಕ್ಷವಾಗಿರುತ್ತದೆ. ಸಾರ್ವಜನಿಕ ಜೀವನದಲ್ಲಿ ಮಾತು ಮೃದುವಾಗಿದ್ದರೆ ಚಮತ್ಕಾರ, ನಡೆ ಶುದ್ಧವಾಗಿದ್ದರೆ ಪುರಸ್ಕಾರ ಸಿಗಲಿದ್ದು, ಅದೇ ಶಿವನ ಸಾಕ್ಷಾತ್ಕಾರವಾಗಿದೆ” ಎಂದು ಮಾರ್ಮಿಕವಾಗಿ ನುಡಿದರು.

 

 


Share this with Friends

Related Post