Sun. Sep 27th, 2026

ರೈತರ ಸಾಲಮನ್ನಾ ಮಾಡಲು ಒಪ್ಪದ ಕಾಂಗ್ರೆಸ್ಸಿಗರು ‘ಪಾಪಿಗಳು’: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

Share this with Friends

ಬೆಂಗಳೂರು: “2018ರಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ₹25,000 ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ಅಂದು ಮೈತ್ರಿಯಲ್ಲಿದ್ದ ಕಾಂಗ್ರೆಸ್ ನಾಯಕರು ಕನಿಷ್ಠ ಸಹಕಾರವನ್ನೂ ನೀಡಲಿಲ್ಲ. ‘ಸಾಲಮನ್ನಾ ನಿಮ್ಮ ಭರವಸೆ, ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಇಂತಹ ರೈತ ವಿರೋಧಿಗಳು ಪಾಪಿಗಳು” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಇತಿಹಾಸವನ್ನು ಬಿಚ್ಚಿಟ್ಟರು.

ನಾನು ಎಂದೂ ಕೇಂದ್ರದ ಮುಂದೆ ಕೈಚಾಚಲಿಲ್ಲ:

ಸಾಲಮನ್ನಾ ವಿಚಾರದಲ್ಲಿ ಪ್ರಸ್ತುತ ಸರ್ಕಾರದ ನೀತಿಯನ್ನು ಖಂಡಿಸಿದ ಸಚಿವರು, “ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ₹28,000 ಪರಿಹಾರ ನೀಡಿ, ಮೈಕ್ರೋಫೈನಾನ್ಸ್ ಹಾವಳಿಯಿಂದ ರೈತರನ್ನು ರಕ್ಷಿಸಲು ‘ಋಣಮುಕ್ತ ಕಾಯ್ದೆ’ ತಂದಿದ್ದೆ. ಆದರೆ ಆ ಸಂದರ್ಭದಲ್ಲಿ ನಾನು ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರದ ಮುಂದೆ ಎಂದೂ ಕೈಚಾಚಲಿಲ್ಲ, ಭಿಕ್ಷೆ ಬೇಡಲಿಲ್ಲ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರವು ಜನರಿಂದ ಭಾರಿ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡಿ ಇಡೀ ಖಜಾನೆಯನ್ನು ಲೂಟಿ ಹೊಡೆಯುತ್ತಿದೆ. ರೈತರಿಗೆ ಕೇವಲ ₹2,500 ಭಿಕ್ಷೆ ನೀಡುತ್ತಾ, ಸರ್ವಪಕ್ಷ ನಿಯೋಗದ ಹೆಸರಿನಲ್ಲಿ ದೆಹಲಿಗೆ ಹೋಗಿ ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯ ಹೂಡಿ ಸಾರ್ವಜನಿಕರ ಹಣ ಪೋಲು ಮಾಡಲು ಹೊರಟಿದೆ” ಎಂದು ಕಿಡಿಕಾರಿದರು.

ನೈಸ್ ಅಕ್ರಮ ಮತ್ತು ಅಶೋಕ್ ಖೇಣಿಗೆ ಸರ್ಕಾರದ ರಕ್ಷಣೆ:

ನೈಸ್ (NICE) ಯೋಜನೆಯ ಹಗರಣಗಳ ಕುರಿತು ಮುಖ್ಯಮಂತ್ರಿಗಳನ್ನು ನೇರವಾಗಿ ಪ್ರಶ್ನಿಸಿದ ಕುಮಾರಸ್ವಾಮಿ, “ರಾಜ ಹೈಕೋರ್ಟ್ ಕಠಿಣ ಶಬ್ದಗಳಲ್ಲಿ ನೈಸ್ ಯೋಜನೆ ಹಾಗೂ ಅಕ್ರಮ ಟೋಲ್ ಸಂಗ್ರಹದ ಕುರಿತು ತೀರ್ಪು ನೀಡಿದ್ದರೂ, ಈ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ಅಶೋಕ್ ಖೇಣಿಗೆ ಏಕೆ ರಕ್ಷಣೆ ನೀಡುತ್ತಿದೆ? ಕೊಟ್ಟಿರುವ ಅಧಿಕಾರ ಕಳ್ಳಕಾಕರನ್ನು ರಕ್ಷಿಸಲಿಕ್ಕಲ್ಲ, ಅವರೊಂದಿಗೆ ನೀವೇ ಶಾಮೀಲಾಗಿದ್ದೀರಿ. ನೈಸ್ ಸಂತ್ರಸ್ತ ರೈತರ ಸಭೆಯಲ್ಲಿ ಯುವಕನೊಬ್ಬ ತನ್ನ ತಂದೆ ಕಾಣೆಯಾಗಿ ವರ್ಷ ಕಳೆದಿದೆ ಎಂದು ಕಣ್ಣೀರು ಹಾಕಿದ್ದಾನೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಮಿಸ್ಟರ್ ಶಿವಕುಮಾರ್? ನನ್ನದೇನಿದ್ದರೂ ನೇರ ಹೋರಾಟ, ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. ದಿನಕ್ಕೊಂದು ಹಗರಣದ ಮಾಹಿತಿ ಬಿಡುಗಡೆ ಮಾಡುತ್ತೇನೆ, ಮುಂದೆ ಏನೇನಾಗುತ್ತದೋ ಕಾದು ನೋಡಿ” ಎಂದು ಮಾರ್ಮಿಕವಾಗಿ ಎಚ್ಚರಿಸಿದರು.

ಇಡಿ ದಾಳಿ ಆತಂಕ ಮತ್ತು ಕೆಪಿಎಸ್‌ಸಿ ಅಕ್ರಮ:

ಚುನಾವಣೆ ಸಂದರ್ಭದಲ್ಲಿ ತಮ್ಮ ಮೇಲೆ ಇಡಿ (ED) ದಾಳಿಯಾಗಲಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು, “ಅಕ್ರಮ ಮಾಡದಿದ್ದರೆ ಇಡೀ ರಾತ್ರಿ ನಿದ್ರೆಗೆಟ್ಟು ಕೂರುವ ಹಾಗೂ ಐಟಿ, ಇಡಿ ಬಗ್ಗೆ ಭಯಪಡುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು. ಇದೇ ವೇಳೆ ಕೆಪಿಎಸ್‌ಸಿ (KPSC) ಹಾಗೂ ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಇಲಾಖೆಯಲ್ಲಿ ನಡೆದಿರುವ 24 ಇಂಜಿನಿಯರ್‌ಗಳ ಅಕ್ರಮ ನೇಮಕಾತಿಯನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿಗಳು ತಪ್ಪು ಮಾಡಿದವರಿಗೆ ತರಾತುರಿಯಲ್ಲಿ ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರೈತರಿಗೆ ಪ್ರೋತ್ಹಾಹ ಧನ ಹೆಚ್ಚಿಸಿ:

ಹಾಲಿನ ದರ ಹೆಚ್ಚಳದ ಪ್ರಸ್ತಾಪವನ್ನು ವಿರೋಧಿಸಿದ ಕುಮಾರಸ್ವಾಮಿ, ಜನರ ಮೇಲೆ ಹೊರೆ ಹಾಕುವ ಬದಲು ಸರ್ಕಾರವೇ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ₹10 ರಿಂದ ₹15 ಕ್ಕೆ ಹೆಚ್ಚಿಸಬೇಕು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಫಿ, ತಿಂಡಿಗೇ ₹200 ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಬಡ ರೈತರಿಗೆ ಪ್ರೋತ್ಸಾಹ ಧನ ಹಾಗೂ ವೈಜ್ಞಾನಿಕ ಬರ ಪರಿಹಾರ ನೀಡುವುದು ಕಷ್ಟವೇ ಎಂದು ಪ್ರಶ್ನಿಸಿದರು. ಅಲ್ಲದೆ, ಕಳೆದ ಐದು ದಿನಗಳಿಂದ ಅಮರಣಾಂತ ಉಪವಾಸ ಕೈಗೊಂಡಿದ್ದ ರೈತರ ಮೇಲೆ ಸುಮೊಟೊ ಕೇಸ್ ದಾಖಲಿಸಿರುವ ಸರ್ಕಾರದ ಕ್ರಮ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಜೆಡಿಎಸ್ ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲಲಿದೆ ಎಂದು ಪ್ರಕಟಿಸಿದರು.

 

 


Share this with Friends

Related Post