Sun. Sep 27th, 2026

ನಾಲ್ಕು ತಿಂಗಳ ಬಳಿಕ ಸಕ್ರೆಬೈಲು ಆನೆ ಬಿಡಾರ ಪುನರಾರಂಭ: ಹೊಸ ನಿಯಮಗಳಿಗೆ ಪ್ರವಾಸಿಗರ ಮಿಶ್ರ ಪ್ರತಿಕ್ರಿಯೆ

Share this with Friends

ಶಿವಮೊಗ್ಗ: ವನ್ಯಜೀವಿ ಪ್ರೇಮಿಗಳು ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರವು ಸುದೀರ್ಘ ನಾಲ್ಕು ತಿಂಗಳ ಬಿಗಡಾಯದ ನಂತರ ಕೊನೆಗೂ ಪ್ರವಾಸಿಗರ ವೀಕ್ಷಣೆಗೆ ಮರುಮುಕ್ತಗೊಂಡಿದೆ. ಸರ್ಕಾರದ ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ಬಿಡಾರವನ್ನು ಪುನರಾರಂಭಿಸಲಾಗಿದ್ದು, ಭಾನುವಾರದ ರಜಾದಿನವಾದ ಇಂದು ಬೆಳಗ್ಗೆಯಿಂದಲೇ ಪ್ರವಾಸಿಗರ ದಂಡು ಬಿಡಾರದತ್ತ ಹರಿದುಬಂದಿದೆ.

ಆದರೆ, ಈ ಬಾರಿ ಅರಣ್ಯ ಇಲಾಖೆಯು ಪ್ರವಾಸಿಗರು ಮತ್ತು ಆನೆಗಳ ಸುರಕ್ಷತೆಯ ದೃಷ್ಟಿಯಿಂದ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಜಾರಿಗೆ ತಂದಿದೆ. ಹೊಸ ನಿಯಮಾವಳಿಗಳ ಪ್ರಕಾರ, ಪ್ರವಾಸಿಗರು ಆನೆಗಳನ್ನು ಕೇವಲ ದೂರದಿಂದ ನಿಂತು ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದ್ದಂತೆ ಆನೆಗಳ ಹತ್ತಿರ ಹೋಗಲು, ಅವುಗಳನ್ನು ಮುಟ್ಟಲು ಅಥವಾ ಅವುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

ಪ್ರವಾಸಿಗರಲ್ಲಿ ಮಿಶ್ರ ಪ್ರತಿಕ್ರಿಯೆ:

ಇಲಾಖೆಯ ಈ ಹೊಸ ಶಿಸ್ತುಕ್ರಮದ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವು ಪ್ರವಾಸಿಗರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಮೂಗ ಪ್ರಾಣಿಗಳ ನೆಮ್ಮದಿ ಹಾಗೂ ಮಾನವರ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಅನಿವಾರ್ಯ ಮತ್ತು ಉತ್ತಮ ಕ್ರಮ ಎಂದು ಬೆಂಬಲಿಸಿದ್ದಾರೆ.

ಆದರೆ ದೂರದ ಊರುಗಳಿಂದ ಸಕ್ರೆಬೈಲು ಬಿಡಾರಕ್ಕೆ ಬರುವ ನೂರಾರು ಪ್ರವಾಸಿಗರು ಇಲಾಖೆಯ ಹೊಸ ನಿಯಮದಿಂದ ನಿರಾಶೆಗೊಂಡಿದ್ದಾರೆ. ಆನೆಗಳನ್ನು ಹತ್ತಿರದಿಂದ ನೋಡುವುದು, ಅವು ನದಿಯಲ್ಲಿ ಸ್ನಾನ ಮಾಡುವುದನ್ನು ಕಣ್ಣಾರೆ ಸವಿಯುವುದು ಮತ್ತು ಆನೆಗಳಿಗೆ ಆಹಾರ ನೀಡುವುದೇ ಸಕ್ರೆಬೈಲಿಗೆ ಬರುವ ಮುಖ್ಯ ಉದ್ದೇಶವಾಗಿರುತ್ತದೆ. ಈಗ ಕೇವಲ ದೂರದಿಂದ ನೋಡಿ ವಾಪಸ್ ಹೋಗಬೇಕಿರುವುದರಿಂದ ಪ್ರವಾಸದ ಮಜವೇ ಇಲ್ಲದಂತಾಗಿದೆ ಎಂದು ಹಲವು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ರಜೆಯ ಮಜಾ ಕಳೆಯಲು ಮಲೆನಾಡಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ಎಸ್‌ಒಪಿ (SOP) ಅಡಿಯಲ್ಲಿ ಪ್ರವಾಸಿಗರನ್ನು ನಿಭಾಯಿಸುವುದು ಬಿಡಾರದ ಸಿಬ್ಬಂದಿಗೂ ಒಂದು ಸವಾಲಾಗಿ ಪರಿಣಮಿಸಿದೆ.

 

 


Share this with Friends

Related Post