Mon. Sep 28th, 2026

ಬೆಂಗಳೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಕುಮ್ಕಿ ಆನೆಗಳ ಮೂಲಕ ಶೀಘ್ರದಲ್ಲೇ ಸೆರೆ ಹಿಡಿಯಲು ಸಚಿವ ರಾಮಲಿಂಗಾರೆಡ್ಡಿ ಆದೇಶ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದೆ. ಮೈಸೂರು ರಸ್ತೆಯ ಕೆಂಗೇರಿ ಬಳಿಯ ಅಂಚೆಪಾಳ್ಯದಲ್ಲಿ ಮುಂಜಾನೆ ವಾಕಿಂಗ್ ತೆರಳಿದ್ದ ನಾಗರಾಜ್ (60) ಎಂಬುವವರ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ₹20 ಲಕ್ಷ ತುರ್ತು ಪರಿಹಾರ ಘೋಷಿಸಿದ್ದಾರೆ. 

ವಿಶೇಷ ತಂಡ ರಚನೆ – ಆನೆ ಸೆರೆಗೆ ಕಾರ್ಯಾಚರಣೆ:

ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು, ಸಾರ್ವಜನಿಕರ ರಕ್ಷಣೆಗೆ ಮೊದಲ ಆದ್ಯತೆ ನೀಡಿದ್ದಾರೆ. ರಾಮನಗರ, ಬನ್ನೇರುಘಟ್ಟ ಮತ್ತು ಬೆಂಗಳೂರು ನಗರ ವಿಭಾಗಗಳ ಒಳಗೊಂಡಂತೆ 100ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ ವಿಶೇಷ ಜಂಟಿ ತಂಡವನ್ನು ರಚಿಸಲಾಗಿದೆ. ಕಗ್ಗಲೀಪುರ ಮತ್ತು ಬಿ.ಎಂ ಕಾವಲ್ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಆನೆಯನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯ ಆರಂಭವಾಗಿದೆ.

ದುಬಾರೆಯಿಂದ ಬರಲಿವೆ 4 ಕುಮ್ಕಿ ಆನೆಗಳು:

ಕಾಡಾನೆಯನ್ನು ಆದಷ್ಟು ಬೇಗ ಸುರಕ್ಷಿತವಾಗಿ ಸೆರೆ ಹಿಡಿಯಲು ಕೊಡಗಿನ ದುಬಾರೆ ಆನೆ ಬಿಡಾರದಿಂದ 4 ಸಾಕಾನೆಗಳನ್ನು (ಕುಮ್ಕಿ ಆನೆಗಳು) ತರಿಸಿಕೊಳ್ಳಲಾಗುತ್ತಿದೆ. ಮಂಗಳವಾರ ಬೆಳಗಿನ ಜಾವದ ವೇಳೆಗೆ ಈ ಕುಮ್ಕಿ ಆನೆಗಳು ಬೆಂಗಳೂರನ್ನು ತಲುಪಲಿದ್ದು, ತಜ್ಞ ಮಾವುತರ ನೇತೃತ್ವದಲ್ಲಿ ಆನೆಯನ್ನು ಹಿಡಿಯುವ ಬೃಹತ್ ಕಾರ್ಯಾಚರಣೆ ಆಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯು ಕಾರ್ಯಾಚರಣೆ ಮುಗಿಯುವವರೆಗೆ ಬಿ.ಎಂ ಕಾವಲ್ ಸುತ್ತಮುತ್ತಲಿನ ನಿವಾಸಿಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಮತ್ತು ಜಾಗರೂಕರಾಗಿರುವಂತೆ ಎಚ್ಚರಿಕೆ ಸಂದೇಶ ರವಾನಿಸಿದೆ.

 

 


Share this with Friends

Related Post