Mon. Sep 28th, 2026

ಪೊಲೀಸ್ ಇಲಾಖೆಯಲ್ಲಿ ಸಮಗ್ರ ಸುಧಾರಣೆ: ನಿವೃತ್ತ ಡಿಜಿಪಿ ಆರ್.ಕೆ. ದತ್ತ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಜ್ಞರ ಸಮಿತಿ ರಚನೆ

Share this with Friends

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಿ, ವ್ಯವಸ್ಥೆಯನ್ನು ಇನ್ನಷ್ಟು ತ್ವರಿತ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನಾಧಾರಿತ ಸುಧಾರಣೆಗಳನ್ನು ತರಲು ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್.ಕೆ. ದತ್ತ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ವರದಿ ಸಲ್ಲಿಕೆಗೆ ಗಡುವು:

ಪೊಲೀಸ್ ಇಲಾಖೆಯ ಸಾರ್ವಜನಿಕ ಸೇವೆಗಳು, ಆಂತರಿಕ ಸವಾಲುಗಳು ಹಾಗೂ ಮೂಲಸೌಕರ್ಯಗಳ ಕುರಿತು ಸಮಗ್ರ ಅಧ್ಯಯನ ನಡೆಸಲಿರುವ ಈ ಹಿರಿಯ ಅಧಿಕಾರಿಗಳ ಸಮಿತಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಧ್ಯಯನದ ಬಳಿಕ ಸರ್ಕಾರಕ್ಕೆ ಸುಧಾರಣಾ ವರದಿಯನ್ನು ಸಲ್ಲಿಸಲಿದೆ.

ಸಮಿತಿಯಲ್ಲಿರುವ ಹಿರಿಯ ಅಧಿಕಾರಿಗಳು:

ಆರ್.ಕೆ. ದತ್ತ (ನಿವೃತ್ತ ಡಿಜಿಪಿ) – ಅಧ್ಯಕ್ಷರು

ಆರ್. ಹಿತೇಂದ್ರ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು – ADGP) – ಸದಸ್ಯರು

ಪ್ರಭು ರಾಜ್ (ಡಿಜಿಪಿ ಕಚೇರಿ) – ಸದಸ್ಯರು

ಡಾ. ಸಂಜೀವ್ ಎಂ. ಪಾಟೀಲ್ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) – ಸದಸ್ಯರು

ಮೊಹಮ್ಮದ್ ಎಂ. ಸುಜೀತ್ (ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ) – ಸದಸ್ಯರು

ತಂತ್ರಜ್ಞಾನಾಧಾರಿತ ಮತ್ತು ಹೊಣೆಗಾರಿಕೆಯ ವ್ಯವಸ್ಥೆ:

ಸಮಿತಿಯ ರಚನೆ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಪೊಲೀಸ್ ಸೇವೆಗಳೂ ರೂಪಾಂತರಗೊಳ್ಳಬೇಕು. ಎಫ್‌ಐಆರ್ ದಾಖಲಾತಿ, ಸೈಬರ್ ಅಪರಾಧಗಳ ದೂರು, ತುರ್ತು ಸೇವೆಗಳು ಹಾಗೂ ವಿವಿಧ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ನಾಗರಿಕರಿಗೆ ಸಿಗುವ ಎಲ್ಲಾ ಆನ್‌ಲೈನ್ ಮತ್ತು ನೇರ ಸೇವೆಗಳನ್ನು ತಂತ್ರಜ್ಞಾನದ ಮೂಲಕ ಮತ್ತಷ್ಟು ಸರಳಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ” ಎಂದಿದ್ದಾರೆ.

ಪ್ರಮುಖ ಸುಧಾರಣಾ ಮಾನದಂಡಗಳು:

ಸಿಟಿಜನ್ ಚಾರ್ಟರ್ ಜಾರಿ: ಸಾರ್ವಜನಿಕರಿಗೆ ಸಿಗುವ ಸೇವೆಗಳು ಎಷ್ಟು ಸಮಯದಲ್ಲಿ ಮತ್ತು ಯಾವ ಪ್ರಕ್ರಿಯೆಯ ಮೂಲಕ ಲಭ್ಯವಾಗಬೇಕು ಎಂಬುದಕ್ಕೆ ಸ್ಪಷ್ಟ ಮಾನದಂಡ ನಿಗದಿಪಡಿಸುವುದು.

ಠಾಣೆಗಳ ಸಾಮರ್ಥ್ಯವರ್ಧನೆ: ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ನೇಮಕ ಹಾಗೂ ಠಾಣೆಗಳ ಮೂಲಸೌಕರ್ಯ ಬಲಪಡಿಸುವುದು.

ಆಂತರಿಕ ಸುಧಾರಣೆ ಮತ್ತು ತರಬೇತಿ: ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸಲು ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್ಸ್ (KPI) ವ್ಯವಸ್ಥೆ ಅಳವಡಿಸುವುದು ಮತ್ತು ನಿಯಮಿತ ತರಬೇತಿ ನೀಡುವುದು.

ಸಮುದಾಯ ಪೊಲೀಸಿಂಗ್: ಬಿಟ್ ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕ ಸಭೆಗಳ ಮೂಲಕ ಪೊಲೀಸ್-ಜನಸಾಮಾನ್ಯರ ನಡುವಿನ ಬಾಂಧವ್ಯ ವೃದ್ಧಿಸುವುದು.

“ಪೊಲೀಸ್ ವ್ಯವಸ್ಥೆಯ ಸುಧಾರಣೆ ಎಂದರೆ ಕೇವಲ ಇಲಾಖೆಯ ಆಂತರಿಕ ಬದಲಾವಣೆಯಲ್ಲ, ಅದು ಸಾರ್ವಜನಿಕರಿಗೆ ಸಿಗುವ ಸೇವಾ ಗುಣಮಟ್ಟದ ಸುಧಾರಣೆಯಾಗಿದೆ” ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

 

 


Share this with Friends

Related Post