Mon. Sep 28th, 2026

ಕರಾವಳಿ ಸಿಆರ್‌ಜೆಡ್ ನಿಯಮ ಸಡಿಲಿಸಿ, ಪಶ್ಚಿಮ ಘಟ್ಟ ಅಧಿಸೂಚನೆ ಮರುಪರಿಶೀಲಿಸಿ: ಕೇಂದ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಪತ್ರ

Share this with Friends

ನವದೆಹಲಿ: ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ನೈಜ ಸ್ಥಿತಿಗತಿಗಳನ್ನು ಪರಿಗಣಿಸಿ, ನಿಯಮಗಳನ್ನು ಸಡಿಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್ ಅವರಿಗೆ ಸೋಮವಾರ ಸುದೀರ್ಘ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಕರಾವಳಿ ಮೀನುಗಾರರ ಜೀವನೋಪಾಯ ಮತ್ತು ಪಶ್ಚಿಮ ಘಟ್ಟದ ನಿವಾಸಿಗಳ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ.

ಪತ್ರದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

ಸಿಆರ್‌ಜೆಡ್ (CRZ) ನಕ್ಷೆಗಳ ದೋಷ ತಿದ್ದುಪಡಿ:

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ವಸತಿ ಪ್ರದೇಶಗಳ ರಕ್ಷಣೆ ಅತ್ಯಗತ್ಯವಾಗಿದೆ. ಪ್ರಸ್ತುತ ಅನುಮೋದಿತ ಕರಾವಳಿ ನಕ್ಷೆಯಲ್ಲಿ ಹಲವು ದೋಷಗಳಿದ್ದು, ಕಂದಾಯ ದಾಖಲೆಗಳು, ನವೀಕೃತ ಉಪಗ್ರಹ ಚಿತ್ರಣಗಳು ಮತ್ತು ನೈಜ ಸ್ಥಳ ಪರಿಶೀಲನೆ (Ground-truthing) ನಡೆಸಿ ಸರ್ವೆ ಸಂಖ್ಯೆ-ವಾರು ತಿದ್ದುಪಡಿ ಮಾಡಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.

ಗೋವಾ ಮಾದರಿಯಲ್ಲಿ ಕರ್ನಾಟಕಕ್ಕೂ ನಿಯಮ ಸಡಿಲಿಕೆ:

ಕರಾವಳಿ ಜನರ ಸಾಂಪ್ರದಾಯಿಕ ಮೀನುಗಾರಿಕೆ, ದೋಣಿ ದುರಸ್ತಿ, ಬಲೆ ಹೆಣೆಯುವುದು, ಮೀನು ಸಂಸ್ಕರಣೆ ಮತ್ತು ಸಾಂಪ್ರದಾಯಿಕ ಮನೆಗಳ ದುರಸ್ತಿ ಹಾಗೂ ಪುನರ್ನಿರ್ಮಾಣಕ್ಕೆ ಸಿಆರ್‌ಜೆಡ್ ನಿಯಮಾವಳಿಗಳ ಚೌಕಟ್ಟಿನೊಳಗೆ ಅಗತ್ಯ ಮಾನ್ಯತೆ ನೀಡಬೇಕು. ಪರಿಸರ ಸಂರಕ್ಷಣೆಗೆ ಧಕ್ಕೆಯಾಗದಂತೆ ಗೋವಾ ರಾಜ್ಯಕ್ಕೆ ಸಿಆರ್‌ಜೆಡ್ ನಿಯಮಗಳಲ್ಲಿ ನೀಡಿರುವ ಸಡಿಲಿಕೆಗಳನ್ನು ಕರ್ನಾಟಕದ ಕರಾವಳಿ ಭಾಗಕ್ಕೂ ವಿಸ್ತರಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಪಶ್ಚಿಮ ಘಟ್ಟಗಳ ಇಎಸ್‌ಎ (ESA) ಅಧಿಸೂಚನೆ ಮರುಪರಿಶೀಲನೆ:

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಕೃಷಿ ಭೂಮಿ, ತೋಟಗಳು ಮತ್ತು ಮಾನವ ವಸತಿ ಪ್ರದೇಶಗಳನ್ನು ಸೇರಿಸಿರುವುದು ಅತ್ಯಂತ ಕಳವಳಕಾರಿಯಾಗಿದೆ. ಈ ಬಗ್ಗೆ ಈಗಾಗಲೇ ಪ್ರಧಾನಮಂತ್ರಿಯವರಿಗೂ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ವೈಜ್ಞಾನಿಕ ಸರ್ವೆ ಮತ್ತು ಭೌತಿಕ ಪರಿಶೀಲನೆಯನ್ನು ನಡೆಸಬೇಕು. ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ರಾಜ್ಯದೊಂದಿಗೆ ಚರ್ಚಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸಿಎಂ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪರಿಸರ ಸಂರಕ್ಷಣೆಯಲ್ಲಿ ರಾಜಿಯಿಲ್ಲ:

ಕಾಂಡ್ಲಾ ವನಗಳು (ಮ್ಯಾಂಗ್ರೋವ್‌), ಮರಳಿನ ದಿಬ್ಬಗಳು ಹಾಗೂ ಆಮೆಗಳ ಸಂತಾನೋತ್ಪತ್ತಿ ಪ್ರದೇಶಗಳಂತಹ ‘CRZ-I’ ವಲಯದ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ವೈಜ್ಞಾನಿಕ ಹಾಗೂ ಸತ್ಯಾಸತ್ಯತೆಯ ಆಧಾರದ ಮೇಲೆ ನಿಯಮಗಳನ್ನು ಜಾರಿಗೊಳಿಸುವುದರಿಂದ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ ಎರಡನ್ನೂ ಕಾಯ್ದುಕೊಳ್ಳಬಹುದು ಎಂದು ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ.

 

 


Share this with Friends

Related Post