Mon. Sep 28th, 2026

ಮೇಕೆದಾಟು, ಭದ್ರಾ ಯೋಜನೆಗೆ ಅನುಮೋದನೆ ನೀಡಿ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಡಿ.ಕೆ. ಶಿವಕುಮಾರ್‌ ಮನವಿ

Share this with Friends

ನವದೆಹಲಿ: ಕರ್ನಾಟಕದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರ ಅಗತ್ಯತೆಗಳನ್ನು ಈಡೇರಿಸಲು ಬಾಕಿ ಇರುವ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ತಕ್ಷಣವೇ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದ ಜಲ ಹಿತಾಸಕ್ತಿಗೆ ಸಂಬಂಧಿಸಿದ ನಾಲ್ಕು ಪ್ರಮುಖ ನೀರಾವರಿ ಪ್ರಸ್ತಾವನೆಗಳ ಮನವಿ ಪತ್ರವನ್ನು ಸಲ್ಲಿಸಿ ಸುದೀರ್ಘ ಚರ್ಚೆ ನಡೆಸಿದರು.

ಮೇಕೆದಾಟು ಯೋಜನೆಗೆ ಶೀಘ್ರ ಮಂಜೂರಾತಿ:

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗಾಗಿ ರಾಜ್ಯ ಸರ್ಕಾರ ₹16,745 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (DPR) ಅನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದೆ. ಈ ಯೋಜನೆಗೆ ಯಾವುದೇ ಕಾನೂನು ತೊಡಕುಗಳಿಲ್ಲದ ಕಾರಣ, ಆದ್ಯತೆಯ ಮೇರೆಗೆ ಡಿಪಿಆರ್ ಪರಿಶೀಲಿಸಿ ಶೀಘ್ರ ಒಪ್ಪಿಗೆ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ (CWC) ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗಳು ಕೋರಿದರು.

ಕೃಷ್ಣಾ ಮೇಲ್ದಂಡೆ (UKP-3): ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆ:

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ರ ತೀರ್ಪಿನ ಮೇಲಿನ ಕೇಂದ್ರದ ಅಧಿಸೂಚನೆ ವಿಳಂಬದಿಂದಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ನವೆಂಬರ್ 4, 2026 ರಂದು ವಿಚಾರಣೆಗೆ ಬರಲಿದೆ. ಹೀಗಾಗಿ, ಜಲಶಕ್ತಿ ಸಚಿವಾಲಯವು ನ್ಯಾಯಾಲಯದ ಮುಂದೆ ತುರ್ತು ಅಧಿಸೂಚನೆ ಹೊರಡಿಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಬೇಕು. ಇದರಿಂದ ಕರ್ನಾಟಕ ತನಗೆ ಹಂಚಿಕೆಯಾದ ನೀರಿನ ಪಾಲನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಿಎಂ ವಿವರಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಅನುದಾನ ಬಿಡುಗಡೆ:

ಭದ್ರಾ ಮೇಲ್ದಂಡೆ ಯೋಜನೆಯ ₹21,167.93 ಕೋಟಿ ವೆಚ್ಚದ ಪರಿಷ್ಕೃತ ಅಂದಾಜನ್ನು ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಪರಿಶೀಲಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ, ಈ ಯೋಜನೆಯನ್ನು ಪಿಎಂಕೆಎಸ್‌ವೈ (PMKSY) ಅಡಿಯಲ್ಲಿ ಸೇರಿಸಲು 16 ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಬೇಕು ಮತ್ತು 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ಮಧ್ಯಸ್ಥಿಕೆ ವಹಿಸಬೇಕು ಎಂದು ವಿನಂತಿಸಿದರು.

ನದಿ ಜೋಡಣೆ: ಕರ್ನಾಟಕಕ್ಕೆ ಸಮಪಾಲು ನೀಡಿ:

ಗೋದಾವರಿ-ಕಾವೇರಿ ಜೋಡಣೆ ಮತ್ತು ಬೇಡ್ತಿ-ವರದಾ ಜೋಡಣೆ ಯೋಜನೆಗಳಿಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಇತರ ಫಲಾನುಭವಿ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಅನ್ಯಾಯವಾಗಬಾರದು. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರಾಜ್ಯದ ನ್ಯಾಯಬದ್ಧ ಅಗತ್ಯತೆಗಳನ್ನು ಪರಿಗಣಿಸಿ, ಇತರ ರಾಜ್ಯಗಳಿಗೆ ಸಮಾನವಾಗಿ ಕರ್ನಾಟಕಕ್ಕೂ ನೀರಿನ ಹಂಚಿಕೆ ಮಾಡುವಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ (NWDA) ನಿರ್ದೇಶಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

 

 


Share this with Friends

Related Post