Mon. Sep 28th, 2026

ಮತದಾರರ ಪಟ್ಟಿ ದುರುಪಯೋಗ ಆರೋಪ: ಚುನಾವಣಾ ಆಯೋಗದ ವಿರುದ್ಧ ಹೋರಾಟಕ್ಕೆ ಬಿ.ಕೆ. ಹರಿಪ್ರಸಾದ್ ಕರೆ

Share this with Friends

ಬೆಂಗಳೂರು: “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಹೋರಾಟ ರೂಪಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲಕ್ಷಾಂತರ ಮತಗಳ ಡಿಲೀಟ್ ಆರೋಪ:

ಬೆಂಗಳೂರು ಭಾಗದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಬಿ.ಕೆ. ಹರಿಪ್ರಸಾದ್, “ಬಿಎಲ್‌ಒ (BLO)ಗಳನ್ನು ಬಳಸಿಕೊಂಡು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರ ಹೆಸರುಗಳನ್ನು ಪಟ್ಟಿಯಿಂದ ಕಿತ್ತುಹಾಕಲಾಗುತ್ತಿದೆ. ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ನಮ್ಮ ನಾಯಕರ ಜವಾಬ್ದಾರಿಯಾಗಿದೆ. ಈ ಅಕ್ರಮಗಳ ವಿರುದ್ಧ ನಾವು ವಿಶ್ರಮಿಸದೆ ಹೋರಾಡಬೇಕಿದೆ” ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ:

“ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಅಥವಾ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಲಿಲ್ಲ. ಕೇವಲ ಹಿಜಾಬ್, ಹಲಾಲ್‌ನಂತಹ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿದರು. ಕೇಂದ್ರದ ಈಗಿನ ನಾಯಕತ್ವದಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ನಾವು ಕೇವಲ ಚುನಾವಣೆಗಾಗಿ ಗ್ಯಾರಂಟಿಗಳನ್ನು ನೀಡಿಲ್ಲ, ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ನೀಡಿದ್ದೇವೆ” ಎಂದು ಸಮರ್ಥಿಸಿಕೊಂಡರು. ಆರ್‌ಎಸ್‌ಎಸ್ ಸಂಘಟನೆಯು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶದ ವಿರುದ್ಧ ಕೆಲಸ ಮಾಡಿತ್ತು ಎಂದು ಅವರು ಇದೇ ವೇಳೆ ಟೀಕಿಸಿದರು.

ಕಾರ್ಯಕರ್ತರಿಗೆ ಒಲಿದ ಅಧಿಕಾರ:

ಪಕ್ಷದ ಸಂಘಟನೆ ಮತ್ತು ಹೊಸ ನೇಮಕಾತಿಗಳ ಕುರಿತು ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷವು ಸದಾ ಹರಿಯುವ ನದಿಯಿದ್ದಂತೆ. ಇಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ. ಇದಕ್ಕೆ ನಾನೇ ಉದಾಹರಣೆ, ಸುದೀರ್ಘ 53 ವರ್ಷಗಳ ಬಳಿಕ ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹೈಕಮಾಂಡ್ ಸೂಚನೆಯಂತೆ ಎಲ್ಲರ ಅಭಿಪ್ರಾಯ ಪಡೆದು ತಳಮಟ್ಟದ ನಾಯಕರಾಗಿದ್ದ ಸರವಣ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ. ಈ ಹಿಂದೆ ಯಶಸ್ವಿಯಾಗಿ ಕೆಲಸ ಮಾಡಿದ್ದ ನಂದಕುಮಾರ್ ಅವರಿಗೂ ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ಸಿಗಲಿದೆ” ಎಂದು ಭರವಸೆ ನೀಡಿದರು.

ಬೆಂಗಳೂರು ಗೆಲುವಿಗೆ ತಂತ್ರ:

ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಬೆಂಗಳೂರಿನ ಎಲ್ಲಾ ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಬೇಕು. ಈ ಹಿಂದೆ ಕೇವಲ ಕಾರ್ಯಕರ್ತರು ಹಾಗೂ ಸಣ್ಣ ಸಮುದಾಯಗಳಿಗೆ ಟಿಕೆಟ್ ನೀಡಿದಾಗಲೂ ಬೆಂಗಳೂರಿನಲ್ಲಿ ಪಕ್ಷ ದೊಡ್ಡ ಮಟ್ಟದ ಜಯ ಸಾಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮನ್ಸೂರ್ ಅಲಿಖಾನ್ ಕೇವಲ 33 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಆ ತಪ್ಪು ಮರುಕಳಿಸದಂತೆ ಇಡೀ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

 

 


Share this with Friends

Related Post