Tue. Sep 29th, 2026

ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ: ರೈತ ಮುಖಂಡರಿಗೆ ಪ್ರಲ್ಹಾದ್ ಜೋಶಿ ಮುಕ್ತ ಆಹ್ವಾನ

Share this with Friends

ಹುಬ್ಬಳ್ಳಿ: ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಕ್ಕರೆ ಎಂಎಸ್ಪಿ ಹಾಗೂ ಕಬ್ಬಿನ ಎಫ್‌ಆರ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಮುಕ್ತ ಆಹ್ವಾನ ನೀಡಿದ್ದಾರೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದ್ದು, ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲು ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಸಚಿವರು, ರೈತರ ಬೇಡಿಕೆಗಳು ಹಾಗೂ ಗೊಂದಲಗಳಿಗೆ ಮುಕ್ತವಾಗಿ ಸ್ಪಷ್ಟನೆ ನೀಡಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ನವದೆಹಲಿ ಸಭೆಗೆ ರೈತ ಮುಖಂಡರಿಗೆ ಆಹ್ವಾನ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈತರ ಹಿತರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದ್ದಾರೆ. 2026ರ ಫೆಬ್ರವರಿಯಲ್ಲಿ ರೈತ ಮುಖಂಡರು ತಮ್ಮನ್ನು ಭೇಟಿಯಾಗಿ ಕಬ್ಬಿನ ಎಫ್‌ಆರ್‌ಪಿ (FRP) ಹೆಚ್ಚಿಸುವಂತೆ ಮನವಿ ಮಾಡಿದ್ದನ್ನು ನೆನಪಿಸಿದ ಅವರು, ಕೇಂದ್ರ ಸರ್ಕಾರವು ಮೇ ತಿಂಗಳಿನಲ್ಲಿಯೇ ಎಫ್‌ಆರ್‌ಪಿಯನ್ನು ₹365 ಕ್ಕೆ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಲೆ ನಿಗದಿ ಸಮಿತಿ ಮತ್ತು ರಾಜ್ಯ ಸರ್ಕಾರದ ಕಬ್ಬು ಆಯುಕ್ತರ ಶಿಫಾರಸುಗಳನ್ನು ಆಧರಿಸಿ ಈ ಬೆಲೆ ನಿಗದಿಪಡಿಸಲಾಗುತ್ತದೆ. ಮೇ ತಿಂಗಳ ಬಳಿಕ ರೈತರಿಂದ ಯಾವುದೇ ಹೊಸ ಪ್ರಸ್ತಾಪ ಬಂದಿಲ್ಲ ಎಂದಿರುವ ಜೋಶಿ, ರೈತ ಮುಖಂಡರು ಮತ್ತು ಹೋರಾಟಗಾರರು ನವದೆಹಲಿಗೆ ಬಂದರೆ ಗೌರವದಿಂದ ಸ್ವಾಗತಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳೇನು?

ಹುಬ್ಬಳ್ಳಿಯ ಹೃದಯಭಾಗದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಸಾವಿರಾರು ರೈತರು ಒಟ್ಟುಗೂಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:

ಸಕ್ಕರೆ ಎಂಎಸ್ಪಿ ಹೆಚ್ಚಳ: ಕಳೆದ ಒಂಬತ್ತು ವರ್ಷಗಳಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳವಾಗಿಲ್ಲ. ಪ್ರಸ್ತುತ ಪ್ರತಿ ಕೆಜಿಗೆ ₹31 ರಷ್ಟಿರುವ ಎಂಎಸ್‌ಪಿಯನ್ನು ₹60 ಕ್ಕೆ ಏರಿಸಬೇಕು.

ಕಬ್ಬಿನ ಎಫ್‌ಆರ್‌ಪಿ ಹೆಚ್ಚಳ: ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಟನ್‌ಗೆ ₹5,500 ಕ್ಕೆ ನಿಗದಿಪಡಿಸಬೇಕು.

ಸ್ವಾಮಿನಾಥನ್ ವರದಿ ಜಾರಿ: ರೈತರ ಆರ್ಥಿಕ ಸುಧಾರಣೆಗಾಗಿ ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.

ಚನ್ನಮ್ಮ ವೃತ್ತದಲ್ಲಿ ಸಂಚಾರ ಸ್ತಬ್ಧ; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ರೈತರು ಚನ್ನಮ್ಮ ವೃತ್ತ ಹಾಗೂ ನಿಲಿಜಿನ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿರುವುದರಿಂದ ಹುಬ್ಬಳ್ಳಿಯಲ್ಲಿ ಹಲವು ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿವೆ.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರಾದ ಶಶಿಕಾಂತ ಗುರೂಜಿ ಮತ್ತು ಚೂನಪ್ಪ ಪೂಜಾರಿ ಅವರ ಮನವೊಲಿಸಲು ಯತ್ನಿಸಿದರಾದರೂ ರೈತರು ಹೋರಾಟ ಕೈಬಿಡಲು ನಿರಾಕರಿಸಿದ್ದಾರೆ. “ದೆಹಲಿಗೆ ಹೋಗಿ ಸಭೆ ನಡೆಸುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಅವರೇ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ನಿರ್ಧಾರ ಪ್ರಕಟವಾಗುವವರೆಗೂ ನಾವು ಹುಬ್ಬಳ್ಳಿ ಬಿಟ್ಟು ಕದಲುವುದಿಲ್ಲ” ಎಂದು ಚೂನಪ್ಪ ಪೂಜಾರಿ ಕಡಕ್ ಆಗಿ ಹೇಳಿದ್ದಾರೆ. ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

 

 


Share this with Friends

Related Post