ಬೆಂಗಳೂರು: ರಾಜ್ಯದಲ್ಲಿ ತೀವ್ರ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕೇವಲ ₹2,500 ಅತ್ಯಲ್ಪ ಮೊತ್ತದ ಬರ ಪರಿಹಾರ ಘೋಷಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅನ್ನದಾತರ ಬದುಕಿನ ಜೊತೆ ಕ್ರೂರ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯತ್ವವೇ ಇಲ್ಲದ ಈ ಸರ್ಕಾರವು ಅನ್ನದಾತರಿಗೆ ಭಿಕ್ಷುಕರಿಗೆ ನೀಡಿದಂತೆ ಕನಿಷ್ಠ ಪರಿಹಾರ ನೀಡಿ ಕೈಕಟ್ಟಿ ಕುಳಿತಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಧೋರಣೆ ಖಂಡನೀಯ; ಆರ್ಥಿಕ ಸ್ಥಿತಿಯ ಶ್ವೇತಪತ್ರಕ್ಕೆ ಆಗ್ರಹ:
ಇತ್ತೀಚೆಗೆ ಕಸ್ತೂರಿರಂಗನ್ ವರದಿ ಹಾಗೂ ಬರಗಾಲದ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ರೈತರ ಸಂಕಷ್ಟಕ್ಕೆ ದೊಡ್ಡ ಮಟ್ಟದ ಪರಿಹಾರ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಮಾದರಿಯಲ್ಲಿಯೇ ಹೆಕ್ಟೇರ್‌ಗೆ ₹50,000 ವರೆಗೆ ಪರಿಹಾರ ನೀಡಬೇಕು ಹಾಗೂ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರದ ಮಾದರಿಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ನಾವು ಆಗ್ರಹಿಸಿದ್ದೆವು. ಆದರೆ ಮುಖ್ಯಮಂತ್ರಿಗಳು ಉಡಾಫೆಯ ಮಾತುಗಳನ್ನಾಡಿ ಕೇವಲ ಎರಡೂವರೆ ಸಾವಿರ ರೂಪಾಯಿ ಘೋಷಿಸಿ ಕೈಚೆಲ್ಲಿದ್ದಾರೆ. ರಾಜ್ಯದ ಖಜಾನೆ ಸಂಪೂರ್ಣ ದಿವಾಳಿಯಾಗಿದ್ದು, ಹಣಕಾಸಿನ ಸ್ಥಿತಿಗತಿಯ ಬಗ್ಗೆ ತಕ್ಷಣವೇ ‘ಶ್ವೇತಪತ್ರ’ ಹೊರಡಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ತೆರಿಗೆದಾರರ ಹಣ ಕಾರ್ಯಕರ್ತರ ಪಾಲಿಗೆ:
ರಾಜ್ಯದಲ್ಲಿ ವೃದ್ಧರಿಗೆ, ವಿಶೇಷಚೇತನರಿಗೆ ಮಾಸಾಶನ ನೀಡಲು ಹಣವಿಲ್ಲ, ಬಡವರಿಗೆ ಮನೆ ಒದಗಿಸಿಲ್ಲ ಹಾಗೂ ಗಂಗಾ ಕಲ್ಯಾಣ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಚೇರಿ, ಸಾರಿಗೆ ಮತ್ತು ಇತರೆ ಐಷಾರಾಮಿ ವೆಚ್ಚಗಳಿಗಾಗಿ ಕೋಟ್ಯಂತರ ರೂಪಾಯಿ ಪೋಲು ಮಾಡಲಾಗುತ್ತಿದೆ. ಪ್ರಾಮಾಣಿಕ ತೆರಿಗೆದಾರರ ಹಣವನ್ನು ಕಾಂಗ್ರೆಸ್ ತನ್ನ ಪಕ್ಷದ ಕಾರ್ಯಕರ್ತರನ್ನು ಸಾಕಲು ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಭಾರತ್ ಜೋಡೊ ಸಂಘಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನೇ ಸದಸ್ಯರನ್ನಾಗಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿರುವುದು ಸಾರ್ವಜನಿಕರ ಹಣದ ಲೂಟಿಗೆ ಉತ್ತಮ ಉದಾಹರಣೆಯಾಗಿದೆ ಎಂದು ದೂರಿದರು.
ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ:
ದೇಶದ ಜನರ ವಿಶ್ವಾಸ ಕಳೆದುಕೊಂಡು ಸತತ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಈಗ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ಚುನಾವಣಾ ಆಯೋಗವು ಪ್ರಧಾನಿ ಮೋದಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರು, ತಮಗೆ ತಾಖತ್ತಿದ್ದರೆ ಜನರ ವಿಶ್ವಾಸ ಗಳಿಸಿ ಚುನಾವಣೆ ಗೆಲ್ಲಲಿ. ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಪಾಲಿಗೆ ಕೇವಲ ಭ್ರಮೆಯಾಗಿದೆ ಎಂದು ಲೇವಡಿ ಮಾಡಿದರು.
ಹರಿಪ್ರಸಾದ್ ಅವರಿಗೆ ಶಿಕಾರಿಪುರಕ್ಕೆ ಸ್ವಾಗತ, ಸವಾಲು ಸ್ವೀಕಾರ:
ಬಳ್ಳಾರಿ ಚಲೋ ಪಾದಯಾತ್ರೆಯಿಂದ ಪ್ರೇರಣೆಗೊಂಡು ಶಿಕಾರಿಪುರದಿಂದ ಪಾದಯಾತ್ರೆ ಆರಂಭಿಸಲು ಮುಂದಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಸ್ವಾಗತ ಕೋರಿದ ವಿಜಯೇಂದ್ರ, “ಅವರು ಶಿಕಾರಿಪುರಕ್ಕೆ ಬಂದು ಯಡಿಯೂರಪ್ಪನವರ ಹೋರಾಟದ ನೆಲದಲ್ಲಿ ಆಗಿರುವ ಅಭಿವೃದ್ಧಿಯನ್ನು ಕಣ್ಣಾರೆ ನೋಡಿ ಹೋಗಲಿ. ಜೀವನದಲ್ಲಿ ಒಂದೂ ನೇರ ಚುನಾವಣೆ ಗೆಲ್ಲದ ಹರಿಪ್ರಸಾದ್ ಮತ್ತು ಕಾಂಗ್ರೆಸ್ ಪಕ್ಷ ಶಿಕಾರಿಪುರದಲ್ಲಿ ಗೆಲ್ಲುವ ಸವಾಲು ಹಾಕಿದೆ. ಈ ಸವಾಲನ್ನು ನಾನು ಮುಕ್ತವಾಗಿ ಸ್ವೀಕರಿಸಿದ್ದೇನೆ” ಎಂದರು. ಬಿಜೆಪಿಯು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ನಿಮಿತ್ತ ಶೀಘ್ರದಲ್ಲೇ ‘ಬೂತ್ ವಿಜಯ ಸಂಕಲ್ಪ ಯಾತ್ರೆ’ ಆರಂಭಿಸಲಿದ್ದು, ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಬಡವರ ವಿರೋಧಿ ನೀತಿಯನ್ನು ಜನರೆದುರು ಬಯಲು ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

