Tue. Sep 29th, 2026

ರೈಲು ಪ್ರಯಾಣಿಕರ ಗಮನಕ್ಕೆ: ಮೈಸೂರು ಯಾರ್ಡ್ ಕಾಮಗಾರಿ; ವಂದೇ ಭಾರತ್ ಸೇರಿ ಹಲವು ರೈಲುಗಳ ಸಂಚಾರ ವ್ಯತ್ಯಯ, ಮಾರ್ಗ ಬದಲಾವಣೆ!

Share this with Friends

ಮೈಸೂರು: ಮೈಸೂರು ರೈಲ್ವೆ ಯಾರ್ಡ್‌ನಲ್ಲಿ ಅತ್ಯಗತ್ಯವಾಗಿ ಕೈಗೊಳ್ಳಬೇಕಾಗಿರುವ ತುರ್ತು ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 2 ಮತ್ತು 3 ರಂದು ಮೈಸೂರು ಮಾರ್ಗವಾಗಿ ಸಂಚರಿಸುವ ವಂದೇ ಭಾರತ್ ಸೇರಿದಂತೆ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದು, ಮಾರ್ಗ ಬದಲಾವಣೆ ಹಾಗೂ ಮರು ವೇಳಾಪಟ್ಟಿ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕರು ಯಾವುದೇ ಗೊಂದಲಕ್ಕೀಡಾಗದಂತೆ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಸಂಪೂರ್ಣ ವಿವರ ಇಲ್ಲಿದೆ:

ಸಂಪೂರ್ಣ ರದ್ದಾಗಿರುವ ರೈಲುಗಳು:

ಅಕ್ಟೋಬರ್ 2: ರೈಲು ಸಂಖ್ಯೆ 56232 ಎಸ್‌ಎಂಡಿಟಿ ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು.

ಅಕ್ಟೋಬರ್ 3: ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 56202 ಮೈಸೂರು–ಚಾಮರಾಜನಗರ ಪ್ಯಾಸೆಂಜರ್ ರೈಲುಗಳು.

ಭಾಗಶಃ ರದ್ದಾಗಿರುವ ರೈಲುಗಳು (ಪಾಂಡವಪುರ/ಮೈಸೂರು ನಿಲುಗಡೆ):

ರೈಲು ಸಂಖ್ಯೆ 66553 (ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ಮೆಮು): ಅಕ್ಟೋಬರ್ 2 ರಂದು ಈ ರೈಲು ಪಾಂಡವಪುರ–ಅಶೋಕಪುರಂ ನಡುವೆ ರದ್ದಾಗಲಿದ್ದು, ಪಾಂಡವಪುರದಲ್ಲೇ ಪ್ರಯಾಣ ಮುಗಿಸಲಿದೆ.

ರೈಲು ಸಂಖ್ಯೆ 66554 (ಅಶೋಕಪುರಂ–ಕೆಎಸ್‌ಆರ್ ಬೆಂಗಳೂರು ಮೆಮು): ಅಕ್ಟೋಬರ್ 3 ರಂದು ಈ ರೈಲು ಅಶೋಕಪುರದ ಬದಲಿಗೆ ಪಾಂಡವಪುರದಿಂದಲೇ ಬೆಂಗಳೂರಿಗೆ ಹೊರಡಲಿದೆ.

ರೈಲು ಸಂಖ್ಯೆ 66579 (ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ಮೆಮು): ಅಕ್ಟೋಬರ್ 3 ರಂದು ಈ ರೈಲು ಪಾಂಡವಪುರದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ರೈಲು ಸಂಖ್ಯೆ 66580 (ಅಶೋಕಪುರಂ–ಕೆಎಸ್‌ಆರ್ ಬೆಂಗಳೂರು ಮೆಮು): ಅಕ್ಟೋಬರ್ 2 ರಂದು ಅಶೋಕಪುರದ ಬದಲಿಗೆ ಪಾಂಡವಪುರದಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ.

ರೈಲು ಸಂಖ್ಯೆ 56281 (ಚಾಮರಾಜನಗರ–ತುಮಕೂರು ಪ್ಯಾಸೆಂಜರ್): ಅಕ್ಟೋಬರ್ 3 ರಂದು ಚಾಮರಾಜನಗರ–ಮೈಸೂರು ನಡುವೆ ರದ್ದಾಗಲಿದ್ದು, ಚಾಮರಾಜನಗರದ ಬದಲಿಗೆ ಮೈಸೂರಿನಿಂದಲೇ ತುಮಕೂರಿಗೆ ಹೊರಡಲಿದೆ.

ಮುರುಡೇಶ್ವರ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ (ಪ್ರಮುಖ ನಿಲ್ದಾಣಗಳು ರದ್ದು):

ಅಕ್ಟೋಬರ್ 2 ರಂದು ಹೊರಡುವ ಬೆಂಗಳೂರು-ಮುರುಡೇಶ್ವರ ರೈಲುಗಳ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದರಿಂದಾಗಿ ಈ ಕೆಳಗಿನ ನಿಲ್ದಾಣಗಳ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ:

ರೈಲು ಸಂಖ್ಯೆ 16585 (ಎಸ್‌ಎಮ್‌ವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್): ಈ ರೈಲು ಕೆಎಸ್‌ಆರ್ ಬೆಂಗಳೂರು–ನೆಲಮಂಗಲ–ಶ್ರವಣಬೆಳಗೊಳ–ಹಾಸನ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆನರಸೀಪುರ ನಿಲ್ದಾಣಗಳಲ್ಲಿ ಈ ರೈಲಿನ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 16586 (ಮುರುಡೇಶ್ವರ–ಎಸ್‌ಎಮ್‌ವಿಟಿ ಬೆಂಗಳೂರು ಎಕ್ಸ್‌ಪ್ರೆಸ್): ಈ ರೈಲು ಹಾಸನ–ಶ್ರವಣಬೆಳಗೊಳ–ನೆಲಮಂಗಲ–ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಹೊಳೆನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ತಡವಾಗಿ ಹೊರಡಲಿರುವ ರೈಲುಗಳು (ಮರು ವೇಳಾಪಟ್ಟಿ):

ಅಕ್ಟೋಬರ್ 3 ರಂದು ಮೈಸೂರು ಮತ್ತು ಅಶೋಕಪುರಂನಿಂದ ಹೊರಡುವ ಹಲವು ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ:

ಚೆನ್ನೈ ವಂದೇ ಭಾರತ್ (20663): ಮೈಸೂರಿನಿಂದ 15 ನಿಮಿಷ ತಡವಾಗಿ ಹೊರಡಲಿದೆ.

ಮೈಸೂರು–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16215): ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ (20676): ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206): ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

ಅಶೋಕಪುರಂ–ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (16552): ಅಶೋಕಪುರಂನಿಂದ 65 ನಿಮಿಷ ತಡವಾಗಿ ಹೊರಡಲಿದೆ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208): ಮೈಸೂರಿನಿಂದ 60 ನಿಮಿಷ ತಡವಾಗಿ ಹೊರಡಲಿದೆ.

ರೈಲು ಸಂಚಾರ ನಿಯಂತ್ರಣ: ಅಕ್ಟೋಬರ್ 3 ರಂದು ಚಾಮರಾಜನಗರದಿಂದ ಹೊರಡುವ ರೈಲು ಸಂಖ್ಯೆ 56201 ಚಾಮರಾಜನಗರ–ಮೈಸೂರು ಪ್ಯಾಸೆಂಜರ್ ರೈಲನ್ನು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ (ತಡೆಹಿಡಿಯಲು) ಒಳಪಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post