Tue. Sep 29th, 2026

“ಉಪ್ಪನ್ನು ಇನ್ಮುಂದೆ ಆಹಾರದ ತರಹ ಬಳಸಬೇಡಿ, ಔಷಧದ ರೀತಿ ಮಿತವಾಗಿ ಬಳಸಿ” – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಕರೆ

Share this with Friends

ಬೆಂಗಳೂರು: ರಾಜ್ಯದಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ರಕ್ತದೊತ್ತಡ (ಬಿಪಿ) ಹಾಗೂ ಹೃದಯಾಘಾತದ ಪ್ರಕರಣಗಳಿಗೆ ಬ್ರೇಕ್ ಹಾಕಲು ಕರ್ನಾಟಕ ಆರೋಗ್ಯ ಇಲಾಖೆಯು ಅತಿಯಾದ ಉಪ್ಪು ಸೇವನೆಗೆ ಕಡಿವಾಣ ಹಾಕುವ ಮಹತ್ವದ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಮನುಷ್ಯನ ದೇಹಕ್ಕೆ ಸಕ್ಕರೆಯಷ್ಟೇ ಉಪ್ಪು ಕೂಡ ಅತ್ಯಂತ ಅಪಾಯಕಾರಿ ಆಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಗಂಭೀರ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಸಾರ್ವಜನಿಕರ ದೈಹಿಕ ಸುರಕ್ಷತೆಯ ಹಿತದೃಷ್ಟಿಯಿಂದ ಉಪ್ಪನ್ನು ಇನ್ಮುಂದೆ ಆಹಾರ ಪದಾರ್ಥಕ್ಕಿಂತ ಹೆಚ್ಚಾಗಿ ಮಿತವಾಗಿ ‘ಔಷಧದ ರೀತಿ’ಯಲ್ಲಿ ಬಳಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಬೆಲೆ ಹೆಚ್ಚಾದರೂ ಬಳಕೆಗೆ ಕಡಿವಾಣ ಅಗತ್ಯ: ಸಚಿವ ಯು.ಟಿ. ಖಾದರ್

 “ಮಾರುಕಟ್ಟೆಯಲ್ಲಿ ಉಪ್ಪಿನ ದರ ದುಬಾರಿಯಾದರೂ ಯಾವುದೇ ತೊಂದರೆಯಿಲ್ಲ. ಬೆಲೆ ಹೆಚ್ಚಾದಾಗ ಜನರು ಸಹಜವಾಗಿಯೇ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಖರೀದಿಸಿ, ಕಡಿಮೆ ಸೇವಿಸುತ್ತಾರೆ. ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ” ಎಂದರು.

ಇದರೊಂದಿಗೆ, ಸಿಗರೇಟ್ ಹಾಗೂ ತಂಬಾಕು ಪ್ಯಾಕೆಟ್‌ಗಳ ಮಾದರಿಯಲ್ಲಿಯೇ ಇನ್ಮುಂದೆ ಉಪ್ಪಿನ ಪ್ಯಾಕೆಟ್‌ಗಳ ಮೇಲೂ “ಅತಿಯಾದ ಉಪ್ಪು ಸೇವನೆಯಿಂದ ಏನೆಲ್ಲಾ ರೋಗಗಳು ಮತ್ತು ಭೀಕರ ಆರೋಗ್ಯ ಸಮಸ್ಯೆಗಳು ಬರುತ್ತವೆ” ಎಂಬ ಮುನ್ನೆಚ್ಚರಿಕೆಯನ್ನು ಕಡ್ಡಾಯವಾಗಿ ಪ್ರಿಂಟ್ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ. ಮಕ್ಕಳ ಆರೋಗ್ಯ ರಕ್ಷಣೆಗಾಗಿ ಶಾಲಾ ಮತ್ತು ಕಾಲೇಜುಗಳ ಕ್ಯಾಂಟೀನ್‌ಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆಯ ತಜ್ಞರ ಸಮಿತಿಯು ವಿಶೇಷ ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸುತ್ತಿದೆ ಎಂದು ಅವರು ವಿವರಿಸಿದರು.

FSSAI ಹೊರಡಿಸಿರುವ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳು:

ಬೆಳೆಯುತ್ತಿರುವ ಹೃದಯಸಂಬಂಧಿ ಕಾಯಿಲೆಗಳ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಸಾರ್ವಜನಿಕರು, ಹೋಟೆಲ್‌ಗಳು ಹಾಗೂ ಆಹಾರ ಸಿದ್ಧಪಡಿಸುವ ಕಂಪನಿಗಳಿಗೆ ಉಪ್ಪು ಬಳಕೆಯ ಪ್ರಮಾಣವನ್ನು ನಿಗದಿಪಡಿಸಿ ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡಿದೆ.

ದಿನಕ್ಕೆ ಕೇವಲ 5 ಗ್ರಾಂ ಮಿತಿ: ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂಗಿಂತ ಕಡಿಮೆ ಉಪ್ಪನ್ನು ಮಾತ್ರ ಸೇವನೆ ಮಾಡಬೇಕು. ಇದಕ್ಕಿಂತ ಅತಿಯಾಗಿ ಉಪ್ಪು ತಿಂದರೆ ಹೃದಯಾಘಾತದ ತೀವ್ರ ಅಪಾಯವಿರುತ್ತದೆ.

ರುಚಿ ನೋಡದೆ ಉಪ್ಪು ಸುರಿಯಬೇಡಿ: ಊಟ ಮಾಡುವಾಗ ತಟ್ಟೆಗೆ ಆಹಾರ ಬಂದ ತಕ್ಷಣ ಅದರ ರುಚಿಯನ್ನು ನೋಡದೆಯೇ, ಅಭ್ಯಾಸಬಲದಿಂದ ಹೆಚ್ಚುವರಿ ಉಪ್ಪನ್ನು ಮೇಲಿಂದ ಸುರಿಯುವ ಕೆಟ್ಟ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು.

ಸಂಸ್ಕರಿಸಿದ ಆಹಾರಗಳ ಬಳಕೆಗೆ ಬ್ರೇಕ್: ಬೇಕರಿ ತಿಂಡಿಗಳು, ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಹಾಗೂ ಇನ್‌ಸ್ಟಂಟ್ ರೆಡಿ-ಟು-ಈಟ್ ಪ್ಯಾಕೆಟ್ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ವಿಪರೀತ ಇರುವುದರಿಂದ ಇವುಗಳ ಸೇವನೆಯನ್ನು ಸಂಪೂರ್ಣ ತಗ್ಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಸಲಾಗಿದೆ.

 


Share this with Friends

Related Post