Fri. Oct 2nd, 2026

ಮತದಾರರ ಪಟ್ಟಿ ಮರು ಪರಿಶೀಲನೆಗೆ ಇಸಿಐ ಆದೇಶ: ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿ.ಕೆ. ಶಿವಕುಮಾರ್‌

Share this with Friends

ಬೆಂಗಳೂರು: ದೇಶಾದ್ಯಂತ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಿ, ಹೆಸರು ಕೈಬಿಟ್ಟು ಹೋಗಿರುವ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸುವಂತೆ ಭಾರತ ಚುನಾವಣಾ ಆಯೋಗ (ECI) ಆದೇಶ ಹೊರಡಿಸಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶಂಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ASDD) ಮತದಾರರ ಪಟ್ಟಿಯನ್ನು ವಿಶೇಷ ಅಭಿಯಾನದ ಮೂಲಕ ಮರುಪರಿಶೀಲಿಸಲು ಇಸಿಐ ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು. ರಾಜ್ಯ ಚುನಾವಣಾ ಆಯೋಗದ ಎದುರು ನಡೆಸಿದ ಪ್ರತಿಭಟನೆಯ ಫಲವಾಗಿ ಕೇಂದ್ರ ಚುನಾವಣಾ ಆಯೋಗವು ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಅವರು ಸ್ವಾಗತಿಸಿದರು. ಇದು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಸಂದ ಜಯ ಎಂದೂ ಅವರು ಬಣ್ಣಿಸಿದರು.

ಬಿಜೆಪಿ ವಿರುದ್ಧ ‘ಮತಗಳ್ಳತನ’ದ ವಾಗ್ದಾಳಿ

ಸಮಾಜದ ದುರ್ಬಲ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 25,000 ಅರ್ಜಿಗಳನ್ನು ನೀಡಿರುವುದಾಗಿ ವಿರೋಧ ಪಕ್ಷಗಳೇ ಒಪ್ಪಿಕೊಂಡಿರುವುದು ಅವರ ಕ್ರಿಮಿನಲ್ ಸಂಚಿಗೆ ಸಾಕ್ಷಿಯಾಗಿದೆ ಎಂದ ಅವರು, ಆರ್‌. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರು ತಾವೇ ‘ಮತಗಳ್ಳತನದ ಪಿತಾಮಹರು’ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಇಂತಹ ಪಿತೂರಿ ನಡೆಸಿರುವವರನ್ನು ತಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ವಿಶೇಷ ಶಿಬಿರಗಳ ಆಯೋಜನೆಗೆ ಸೂಚನೆ

ಚುನಾವಣಾ ಆಯೋಗದ ಹೊಸ ಆದೇಶದ ಪ್ರಕಾರ, ಫಾರ್ಮ್ 7 ರ ಮೂಲಕ ಸಾಮೂಹಿಕವಾಗಿ ಮತಗಳನ್ನು ಡಿಲೀಟ್ ಮಾಡಲು ಅವಕಾಶವಿರುವುದಿಲ್ಲ. ಮೊದಲ ಬಾರಿಗೆ ಮತದಾರರಾಗುವ ಯುವಕರಿಗಾಗಿ, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್‌ ಇದೇ ವೇಳೆ ಸ್ಪಷ್ಟಪಡಿಸಿದರು.

 

 


Share this with Friends

Related Post