Fri. Oct 2nd, 2026

ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ ಅನಾವರಣ: ಮುಖ್ಯಮಂತ್ರಿಗಳಿಂದ ಚಾಲನೆ

Share this with Friends

ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದ ಐತಿಹಾಸಿಕ ಸ್ಥಳಗಳನ್ನು ಸ್ಮರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು (ಗ್ಯಾಸ್ ಕಾಲೇಜು) ಆವರಣದಲ್ಲಿ ನಿರ್ಮಿಸಲಾಗಿರುವ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಅಧಿಕೃತವಾಗಿ ಅನಾವರಣಗೊಳಿಸಿದರು.

ರಾಜ್ಯದ ಒಟ್ಟು 87 ಐತಿಹಾಸಿಕ ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸುವ ಸರ್ಕಾರದ ಆಯವ್ಯಯ ಘೋಷಣೆಯನ್ವಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.

‘ಗಾಂಧಿ ಭಾರತ’ ಅಭಿಯಾನದ ಹಿನ್ನೆಲೆ

ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷಗಳು ಸಂದಿವೆ. ಈ ಶತಮಾನೋತ್ಸವದ ನೆನಪಿಗಾಗಿ “ಗಾಂಧಿ ಭಾರತ” ಅಭಿಯಾನದಡಿಯಲ್ಲಿ ರಾಜ್ಯಾದ್ಯಂತ ಈ ಸ್ಮಾರಕಗಳನ್ನು ನಿರ್ಮಿಸಲಾಗುತ್ತಿದೆ.

ಬೆಂಗಳೂರಿನ ಐತಿಹಾಸಿಕ ನಂಟು

1915ರ ಮೇ 8ರಂದು ಮಹಾತ್ಮ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಅವರು ಭೇಟಿ ನೀಡಿದ್ದ ಆಗಿನ ಸರ್ಕಾರಿ ಪ್ರೌಢಶಾಲೆಯೇ ಇಂದಿನ ಸರ್ಕಾರಿ ಕಲಾ ಕಾಲೇಜು ಆಗಿದೆ. ಅಲ್ಲಿ ಗಾಂಧೀಜಿಯವರು ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಈ ಅಪೂರ್ವ ಕ್ಷಣದ ನೆನಪಿಗಾಗಿ ಕಾಲೇಜಿನ ಆವರಣದಲ್ಲೇ ಮೊದಲ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.

ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲಾಕೃತಿ

ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಆಕರ್ಷಕ ಸ್ಮಾರಕ ಸ್ತಂಭವನ್ನು ಕೆತ್ತಿದ್ದಾರೆ. ಇದು 10 ಅಡಿ ಎತ್ತರ ಹಾಗೂ 3.25 ಅಡಿ ಅಗಲದ ಏಕಶಿಲಾ ಗ್ರಾನೈಟ್ ಕಲಾಕೃತಿಯಾಗಿದೆ. ಸ್ತಂಭದ ಮೇಲ್ಭಾಗದಲ್ಲಿ ನಾಲ್ಕು ಮುಖದ ಸಿಂಹವುಳ್ಳ ರಾಷ್ಟ್ರೀಯ ಲಾಂಛನ ಹಾಗೂ ಅಶೋಕ ಚಕ್ರವಿದೆ. ಅದರ ಕೆಳಗೆ ಧ್ಯಾನಸ್ಥ ಗಾಂಧೀಜಿಯವರ ಚಿತ್ರ, ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳ ಸಂದೇಶ, ಅವರ ಸಹಿ ಮತ್ತು ಚರಕದ ಚಿತ್ರಣವನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಈ ವಿಶಿಷ್ಟ ಕಲಾಕೃತಿಯನ್ನು ಸಿದ್ಧಪಡಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಎಚ್. ಕೆ. ಪಾಟೀಲ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್. ಶಂಕರ್, ವಾರ್ತಾ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಇಲಾಖೆಯ ಆಯುಕ್ತರಾದ ಎಂ. ಎನ್. ಅನುಚೇತ್ ಸೇರಿದಂತೆ ಹಲವು ಅಧಿಕಾರಿಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 


Share this with Friends

Related Post