Thu. Oct 1st, 2026

ರಾಜ್ಯದಲ್ಲಿ ಭೀಕರ ಬರ: ತುರ್ತು ಪರಿಹಾರಕ್ಕಾಗಿ ಕೇಂದ್ರಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ ಪತ್ರ

Share this with Friends

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಸಂಕಷ್ಟದಲ್ಲಿರುವ ರೈತರು ಮತ್ತು ಗ್ರಾಮೀಣ ಜನರನ್ನು ಕೈಹಿಡಿಯಲು ತಕ್ಷಣವೇ ಆರ್ಥಿಕ ನೆರವು ಬಿಡುಗಡೆ ಮಾಡಬೇಕು ಎಂದು ಕಂದಾಯ ಸಚಿವರೂ ಆದ ಡಿಸಿಎಂ ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರಕ್ಕೆ ತುರ್ತು ಮನವಿ ಮಾಡಿದ್ದಾರೆ. ಈ ಕುರಿತು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

177 ತಾಲ್ಲೂಕುಗಳು ಬರಪೀಡಿತ: ₹46,324 ಕೋಟಿ ನಷ್ಟ

ರಾಜ್ಯದಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ಒಟ್ಟು 177 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಒಟ್ಟಾರೆ ಆರ್ಥಿಕ ನಷ್ಟ ₹46,324.5 ಕೋಟಿ ದಾಟಿದೆ ಎಂದು ಪ್ರಾಥಮಿಕ ವರದಿಯಲ್ಲಿ ಅಂದಾಜಿಸಲಾಗಿದೆ. ಇನ್ನೂ 40 ತಾಲ್ಲೂಕುಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆ (ಗ್ರೌಂಡ್ ಟ್ರೂಥಿಂಗ್) ಪ್ರಗತಿಯಲ್ಲಿದ್ದು, ಮುಂಗಾರು ಹಂಗಾಮಿನ ಅಂತ್ಯದ ವೇಳೆಗೆ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 220ಕ್ಕೆ ಏರಿಕೆಯಾಗುವ ಭೀತಿ ಎದುರಾಗಿದೆ.

ಬರಗಾಲದ ತೀವ್ರತೆಯಿಂದಾಗಿ ಪ್ರಮುಖ ಕೃಷಿ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಹತ್ತಿ, ಕಬ್ಬು, ಸೋಯಾಬೀನ್ ಹಾಗೂ ಹೆಸರುಕಾಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಇದರೊಂದಿಗೆ ಈರುಳ್ಳಿ, ಅಡಿಕೆ ಹಾಗೂ ಕೆಂಪು ಮೆಣಸಿನಕಾಯಿ ಸೇರಿದಂತೆ ತೋಟಗಾರಿಕಾ ಬೆಳೆಗಳೂ ಒಣಗಿಹೋಗಿದ್ದು, ರೈತರು ಕಂಗಾಲಾಗಿದ್ದಾರೆ.

₹7,142 ಕೋಟಿ ಪರಿಹಾರಕ್ಕೆ ಬೇಡಿಕೆ

ಬರದ ಭೀಕರತೆಯನ್ನು ಎದುರಿಸಲು ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಅಡಿಯಲ್ಲಿ ಕೇಂದ್ರದಿಂದ ಒಟ್ಟು ₹7,142.64 ಕೋಟಿ ಆರ್ಥಿಕ ಸಹಾಯವನ್ನು ಕೋರಿದೆ. ಇದರಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರ ಇನ್‌ಪುಟ್ ಸಬ್ಸಿಡಿಗಾಗಿ ₹4,998.6 ಕೋಟಿ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ವ್ಯವಸ್ಥೆಗಾಗಿ ₹2,144.04 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪರಿಹಾರದ ಮಾನದಂಡ ಬದಲಾಗಲಿ

ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ ನೀಡಲಾಗುವ ಇನ್‌ಪುಟ್ ಸಬ್ಸಿಡಿ ದರಗಳನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. “ಪ್ರಸ್ತುತ ಇರುವ ಪರಿಹಾರದ ಮೊತ್ತವು ಇಂದಿನ ಕೃಷಿ ವೆಚ್ಚಕ್ಕೆ ಹೋಲಿಸಿದರೆ ತೀರಾ ನಗಣ್ಯವಾಗಿದೆ. ಇದು ರೈತರ ನೈಜ ನಷ್ಟದ ಸಣ್ಣ ಭಾಗವನ್ನೂ ಭರಿಸುತ್ತಿಲ್ಲ. 16ನೇ ಹಣಕಾಸು ಆಯೋಗದ ಅವಧಿ ಆರಂಭವಾಗಿರುವುದರಿಂದ, ಈ ಹಳೇ ಮಾನದಂಡಗಳನ್ನು ಆದ್ಯತೆಯ ಮೇರೆಗೆ ಬದಲಾಯಿಸಬೇಕು” ಎಂದು ಡಿಸಿಎಂ ಪ್ರತಿಪಾದಿಸಿದ್ದಾರೆ.

ಮೌಲ್ಯಮಾಪನ ತ್ವರಿತಗೊಳಿಸಲು ಕೋರಿಕೆ

ಕೇಂದ್ರ ಕೃಷಿ ಸಚಿವರಿಗೆ ಬರೆದ ಪತ್ರದಲ್ಲಿ, ರಾಜ್ಯದಲ್ಲಿನ ಸ್ಥಿತಿಗತಿ ಪರಿಶೀಲಿಸಲು ಆಗಮಿಸಿರುವ ಕೇಂದ್ರ ತಂಡದ ಭೇಟಿಯನ್ನು ಡಿಸಿಎಂ ಸ್ವಾಗತಿಸಿದ್ದಾರೆ. ರಾಜ್ಯದ ರೈತರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲು ಕೇಂದ್ರ ತಂಡವು ತನ್ನ ಮೌಲ್ಯಮಾಪನ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಕೃಷಿ ಸಚಿವಾಲಯ ಕ್ರಮ ಕೈಗೊಳ್ಳಬೇಕು ಮತ್ತು ವಿಳಂಬವಿಲ್ಲದೆ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಬರದ ಸವಾಲು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಪರಮೇಶ್ವರ ಅವರು ಪತ್ರದಲ್ಲಿ ತಿಳಿಸಿದ್ದಾರೆ.

 

 


Share this with Friends

Related Post