Fri. Oct 2nd, 2026

ನೈಋತ್ಯ ರೈಲ್ವೆಗೆ ಭರ್ಜರಿ ಆದಾಯ: ಸೆಪ್ಟೆಂಬರ್‌ನಲ್ಲಿ ₹870 ಕೋಟಿ ಗಳಿಕೆ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

Share this with Friends

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು (SWR) ಸರಕು ಸಾಗಣೆ ಹಾಗೂ ಆದಾಯ ಗಳಿಕೆಯಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ. ಸೆಪ್ಟೆಂಬರ್ 2026ರ ಒಂದೇ ತಿಂಗಳಿನಲ್ಲಿ ವಲಯವು ₹870 ಕೋಟಿ ಒಟ್ಟು ಆದಾಯ ಗಳಿಸುವ ಮೂಲಕ ಗಮನಾರ್ಹ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದು ಸೆಪ್ಟೆಂಬರ್ 2025ರ ಆದಾಯಕ್ಕೆ ಹೋಲಿಸಿದರೆ ಶೇ. 15.91 ರಷ್ಟು ಭರ್ಜರಿ ಹೆಚ್ಚಳ ಕಂಡಿದೆ.

ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮೊದಲ ಆರು ತಿಂಗಳ ಅವಧಿಯಲ್ಲಿ ನೈಋತ್ಯ ರೈಲ್ವೆಯ ಒಟ್ಟು ಆದಾಯವು ಬರೋಬ್ಬರಿ ₹4,730 ಕೋಟಿಗಳಿಗೆ ತಲುಪಿದೆ. ವಲಯದ ಈ ಶ್ಲಾಘನೀಯ ಸಾಧನೆಗಾಗಿ ಮಹಾಪ್ರಬಂಧಕರಾದ ಪಿ. ಅನಂತ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು ಅಗ್ರಸ್ಥಾನ

ಸೆಪ್ಟೆಂಬರ್ ತಿಂಗಳಿನಲ್ಲಿ ನೈಋತ್ಯ ರೈಲ್ವೆಯು 4.41 ದಶಲಕ್ಷ ಟನ್‌ಗಳ ಸಾರ್ವಕಾಲಿಕ ಗರಿಷ್ಠ ಸರಕು ಸಾಗಣೆ (ಲೋಡಿಂಗ್) ನಡೆಸಿದೆ. ಸರಕು ಸಾಗಣೆ ವಿಭಾಗದಿಂದಲೇ ಈ ತಿಂಗಳು ₹465 ಕೋಟಿ ಆದಾಯ ಹರಿದುಬಂದಿದೆ. ಸಾಗಣೆಯಾದ ಒಟ್ಟು ಸರಕುಗಳಲ್ಲಿ 1.70 ದಶಲಕ್ಷ ಟನ್‌ಗಳಷ್ಟು ಲೋಡಿಂಗ್‌ನೊಂದಿಗೆ ಕಬ್ಬಿಣದ ಅದಿರು ಮೊದಲ ಸ್ಥಾನದಲ್ಲಿದ್ದರೆ, ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು (1.127 ದಶಲಕ್ಷ ಟನ್) ಹಾಗೂ ಕಲ್ಲಿದ್ದಲು (0.90 ದಶಲಕ್ಷ ಟನ್) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ. ಖನಿಜ ತೈಲ, ಸಿಮೆಂಟ್ ಮತ್ತು ಕಂಟೈನರ್ ಸಾಗಣೆಯೂ ಸಹ ಉತ್ತಮ ಬೆಳವಣಿಗೆ ಕಂಡಿದೆ.

ಪ್ರಯಾಣಿಕರ ಸಂಚಾರದಲ್ಲಿ ಶೇ. 6.83 ವೃದ್ಧಿ

ಕೇವಲ ಸರಕು ಸಾಗಣೆ ಮಾತ್ರವಲ್ಲದೆ ಪ್ರಯಾಣಿಕರ ಸಂಚಾರದಲ್ಲೂ ರೈಲ್ವೆ ಇಲಾಖೆ ಉತ್ತಮ ಪ್ರಗತಿ ಕಂಡಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 1.5 ಕೋಟಿ ಪ್ರಯಾಣಿಕರು ನೈಋತ್ಯ ರೈಲ್ವೆ ಮೂಲಕ ಪ್ರಯಾಣಿಸಿದ್ದು, ಇದರಿಂದ ₹357.5 ಕೋಟಿ ಆದಾಯ ಬಂದಿದೆ. ಇನ್ನು ಕಳೆದ ಆರು ತಿಂಗಳ ಒಟ್ಟು ಲೆಕ್ಕಾಚಾರ ನೋಡುವುದಾದರೆ, ಒಟ್ಟು 9.2 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣಿಕರ ವಿಭಾಗದ ಒಟ್ಟು ಆದಾಯ ₹1,904.10 ಕೋಟಿಗೆ ಏರಿಕೆಯಾಗಿದೆ.

ಇದಲ್ಲದೆ, ಪಾರ್ಸೆಲ್ ವಿಭಾಗದಿಂದ ಸೆಪ್ಟೆಂಬರ್‌ನಲ್ಲಿ ₹15.89 ಕೋಟಿ ಆದಾಯ ಬಂದಿದ್ದು, ಟಿಕೆಟ್ ತಪಾಸಣೆ ಅಭಿಯಾನದಿಂದ ಆರು ತಿಂಗಳಲ್ಲಿ ಒಟ್ಟು ₹33.71 ಕೋಟಿ ದಂಡದ ರೂಪದ ಆದಾಯ ಸಂಗ್ರಹವಾಗಿದೆ. ಒಟ್ಟಾರೆಯಾಗಿ ನೈಋತ್ಯ ರೈಲ್ವೆಯು ತನ್ನ ಎಲ್ಲಾ ಆದಾಯ ಮೂಲಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಯ್ದುಕೊಂಡಿದೆ.

 

 


Share this with Friends

Related Post