ಕಲಬುರಗಿ:”ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಅವರ ಬಳಿ ನಿಜವಾಗಿಯೂ ದಾಖಲೆಗಳಿದ್ದರೆ ಅವುಗಳನ್ನು ಪಾಂಪ್ಲೆಟ್ಗಳ ಮೂಲಕ ಜನರಿಗೆ ಹಂಚಿ ಬಹಿರಂಗಪಡಿಸಲಿ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸವಾಲು ಹಾಕಿದ್ದಾರೆ.
ಕಲಬುರಗಿಯ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ರಾಜಕೀಯ ನಡೆ ಮತ್ತು ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ಜನರ ಹಿತಾಸಕ್ತಿಗಿಂತ ತಮ್ಮ ಸ್ವಹಿತಾಸಕ್ತಿ ಹಾಗೂ ಕುರ್ಚಿ ಉಳಿಸಿಕೊಳ್ಳುವ ಭೀತಿಯಿಂದ ಪಾದಯಾತ್ರೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
‘ದಲಿತರು ಬಲಿಷ್ಠರಾಗುವುದನ್ನು ಸಹಿಸಲು ಸಾಧ್ಯವೇ ಇಲ್ಲ’:
ಕುಮಾರಸ್ವಾಮಿ ಅವರು ತಮ್ಮನ್ನು ‘ಬಲಿತ ದಲಿತ’ ಎಂದು ಕರೆದಿರುವ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, “ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಸಿನಿಮಾ ನಿರ್ಮಾಪಕರು, ನಿರ್ದೇಶಕರಾಗಬಹುದು, ಐಷಾರಾಮಿ ಕಾರುಗಳಲ್ಲಿ ಓಡಾಡಬಹುದು, ರಿಯಲ್ ಎಸ್ಟೇಟ್ ಉದ್ಯಮ ಮಾಡಬಹುದು. ಆದರೆ, ದಲಿತ ಸಮುದಾಯದವರು ಕೋಟ್ ಹಾಕಿಕೊಂಡು, ಇಂಗ್ಲಿಷ್ ಮಾತನಾಡುತ್ತಾ ಉನ್ನತ ಸ್ಥಾನಕ್ಕೇರಿದರೆ ಕೆಲವರಿಗೆ ಯಾಕೆ ಕಣ್ಣುರಿ? ದಲಿತರು ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠರಾಗಬಾರದೇ? ಗೃಹ ಸಚಿವರಾಗಬಾರದೇ?” ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಅವರು, “ದೇಶದಲ್ಲಿ ದಲಿತರಿಗೆ ಆಗುತ್ತಿರುವ ಅವಮಾನಗಳ ಬಗ್ಗೆ ಕುಮಾರಸ್ವಾಮಿ ಎಂದಾದರೂ ಮಾತನಾಡಿದ್ದಾರೆಯೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದಾಗ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ನಂತರ ಸ್ಥಳ ಶುದ್ಧೀಕರಣ ಮಾಡಿದಾಗ ಇವರು ಯಾಕೆ ಧ್ವನಿ ಎತ್ತಲಿಲ್ಲ? ದಲಿತರ ಪ್ರಗತಿಯನ್ನು ಪ್ರಶ್ನಿಸುವ ಇವರ ಮನೋಭಾವ ಸರಿಯಲ್ಲ” ಎಂದರು.
ಚುನಾವಣೆಗೆ ನಿಂತು ಗೆದ್ದು ತೋರಿಸಲಿ:
ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡುವುದನ್ನು ಉಲ್ಲೇಖಿಸಿದ ಖರ್ಗೆ, “ಧೈರ್ಯವಿದ್ದರೆ ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗವನ್ನು ಬಿಟ್ಟು ಕಲಬುರಗಿ ಅಥವಾ ಕರಾವಳಿ ಭಾಗಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ” ಎಂದು ಸವಾಲು ಹಾಕಿದರು. ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರಿನ ರಾಜಕಾರಣದಿಂದಲೇ ಇವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ ಎಂದು ಅವರು ಲೇವಡಿ ಮಾಡಿದರು.
ಸ್ಟಿಂಗ್ ಆಪರೇಷನ್ ಪ್ರಕರಣ: ಕಟ್ಟುನಿಟ್ಟಿನ ತನಿಖೆ
ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಉತ್ತರಿಸಿದ ಸಚಿವರು, “ಈ ಪ್ರಕರಣದ ಬಗ್ಗೆ ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ನಮ್ಮ ಪಕ್ಷದವರೇ ಇರಲಿ ಅಥವಾ ಬೇರೆ ಪಕ್ಷದವರೇ ಇರಲಿ, ತಪ್ಪು ಸಾಬೀತಾದರೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಎಲ್ಲರಿಗೂ ಒಂದೇ” ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಉತ್ಪನ್ನಗಳಿಗೆ ಬೂಸ್ಟ್: ಕಲಬುರಗಿ ಜಿಲ್ಲೆಯ ತೊಗರಿಗೆ ಭೌಗೋಳಿಕ ಗುರುತಿನ (GI) ಟ್ಯಾಗ್ ದೊರಕಿಸಿಕೊಡುವಲ್ಲಿ ಹಾಗೂ ‘ಭೀಮಾ ಪಲ್ಸ್’, ‘ಕಲಬುರಗಿ ರೊಟ್ಟಿ’ಯಂತಹ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ನಮ್ಮ ಸರ್ಕಾರವೇ ಶ್ರಮಿಸಿದೆ ಎಂದು ಸಚಿವರು ನೆನಪಿಸಿದರು.
ತನಿಖೆಗೆ ಮುಕ್ತ ಅವಕಾಶ: ಯಾರ ಮೇಲಾದರೂ ಆರೋಪ ಬಂದಾಗ ತನಿಖೆ ನಡೆಸಲೇಬೇಕು. ಕುಮಾರಸ್ವಾಮಿ ಅವರ ಕಾರ್ಯಕರ್ತರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದರು.

