Mon. Oct 19th, 2026

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಅಕ್ಟೋಬರ್ 23 ರಂದು ‘ಜನತಾ ರ್ಯಾಲಿ’: ಜಂತರ್ ಮಂತರ್ ಮಾದರಿ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಕರೆ

Share this with Friends

ಬೆಂಗಳೂರು: ದೇಶಾದ್ಯಂತ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SSR) ಪ್ರಕ್ರಿಯೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕದ ಪ್ರಮುಖ ರೈತ ಹಾಗೂ ದಲಿತ ಸಂಘಟನೆಗಳು ರಾಜ್ಯಾದ್ಯಂತ ಬೃಹತ್ ಹೋರಾಟಕ್ಕೆ ಕರೆ ನೀಡಿವೆ.

ಈ ಸಾಂವಿಧಾನಿಕ ಹಕ್ಕಿನ ಹೋರಾಟಕ್ಕೆ ಬಹುಭಾಷಾ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಕೂಡ ಧ್ವನಿಗೂಡಿಸಿದ್ದು, ದೆಹಲಿಯ ಐತಿಹಾಸಿಕ ‘ಜಂತರ್ ಮಂತರ್’ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಮುಕ್ತ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಲೋಪಗಳನ್ನು ವಿರೋಧಿಸಿ ರೈತ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ‘ಜನತಾ ರ್ಯಾಲಿ’ ಹಮ್ಮಿಕೊಳ್ಳುತ್ತಿರುವುದಾಗಿ ಪ್ರಕಟಿಸಿದರು. ಚುನಾವಣಾ ಆಯೋಗದ ಏಕಪಕ್ಷೀಯ ನೀತಿಗಳ ವಿರುದ್ಧ ಸಿಡಿದೆದ್ದಿರುವ ಹೋರಾಟಗಾರರು, ಅಕ್ಟೋಬರ್ 23 ರಂದು ದೆಹಲಿಯ ಜಂತರ್ ಮಂತರ್ ಮಾದರಿಯಲ್ಲಿಯೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾಗಿ ತಿಳಿಸಿದರು.

ಪ್ರತಿಭಟನೆಗಳನ್ನು ಕೇವಲ ಒಂದು ಸಣ್ಣ ಆವರಣಕ್ಕೆ (ಫ್ರೀಡಂ ಪಾರ್ಕ್) ಸೀಮಿತಗೊಳಿಸುತ್ತಿರುವುದರ ವಿರುದ್ಧ ಆಕ್ರೋಶ ಹೊರಹಾಕಿರುವ ನಟ ಪ್ರಕಾಶ್ ರಾಜ್, ರೈತ ಮತ್ತು ದಲಿತ ಸಂಘಟನೆಗಳ ಈ ಜಂತರ್ ಮಂತರ್ ಮಾದರಿಯ ಹೋರಾಟದ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. “ನಾಗರಿಕರು ತಮ್ಮ ಹಕ್ಕುಗಳಿಗಾಗಿ ಮತ್ತು ಸರ್ಕಾರದ ನೀತಿಗಳ ವಿರುದ್ಧ ಮುಕ್ತವಾಗಿ ಧ್ವನಿ ಎತ್ತಲು ಸೂಕ್ತ ವಾತಾವರಣ ಇರಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಜನಸಾಮಾನ್ಯರ ಆಕ್ರೋಶ ಸರ್ಕಾರಕ್ಕೆ ತಲುಪಲು ವಿಶಾಲವಾದ ಮುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಯುತ ಧರಣಿ ನಡೆಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗಳು ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಿಕೊಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಅರ್ಹ ಮತದಾರರ ಹೆಸರು ಕೈಬಿಡುವ ಆತಂಕ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, “ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಬಡವರು, ದಲಿತರು ಮತ್ತು ರೈತ ಸಮುದಾಯದ ಲಕ್ಷಾಂತರ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದೆ. ಇದನ್ನು ತಡೆಯಲು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಮೆರವಣಿಗೆಗಳು ನಡೆಯಲಿವೆ” ಎಂದು ತಿಳಿಸಿದರು. ಈ ಹೋರಾಟಕ್ಕೆ ರಾಜ್ಯದ ವಿವಿಧ ಪ್ರಗತಿಪರ ಹಾಗೂ ಕಾರ್ಮಿಕ ಸಂಘಟನೆಗಳು ಕೈಜೋಡಿಸಿರುವುದರಿಂದ ಅಕ್ಟೋಬರ್ 23ರ ಜನತಾ ರ್ಯಾಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

 

 

 


Share this with Friends

Related Post