Mon. Oct 19th, 2026

ರೈಲು ಪ್ರಯಾಣಿಕರೇ ಹುಷಾರ್: ಇಯರ್‌ಫೋನ್ ಇಲ್ಲದೆ ರೀಲ್ಸ್ ವೀಕ್ಷಿಸಿದರೆ, ಜೋರಾಗಿ ಮಾತನಾಡಿದರೆ ಬೀಳುತ್ತೆ ಭಾರಿ ದಂಡ, ಜೈಲು ಶಿಕ್ಷೆಯೂ ಗ್ಯಾರಂಟಿ!

Share this with Friends

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವಾಗ ಕೆಲವರು ಇತರ ಪ್ರಯಾಣಿಕರ ನೆಮ್ಮದಿಗೆ ಭಂಗ ತರುವಂತೆ ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುವುದು, ರೀಲ್ಸ್ ನೋಡುವುದು ಅಥವಾ ಲೌಡ್ ಸ್ಪೀಕರ್ ಆನ್ ಮಾಡಿ ಗಂಟಲು ಹರಿದುಕೊಳ್ಳುವಂತೆ ಮಾತನಾಡುವುದು ಸಾಮಾನ್ಯವಾಗಿದೆ. ಇಂತಹ ‘ಸೌಂಡ್ ಮಾರಿ’ಗಳಿಗೆ ಬಿಸಿ ಮುಟ್ಟಿಸಲು ಭಾರತೀಯ ರೈಲ್ವೆ ಇಲಾಖೆ ಈಗ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ರೈಲ್ವೆ ವಲಯಗಳಿಗೆ ಇಲಾಖೆ ಆದೇಶಿಸಿದೆ.

ರೈಲ್ವೆ ಕಾಯ್ದೆಗೆ ತಿದ್ದುಪಡಿ – ದಂಡ ಮತ್ತು ಜೈಲು ಶಿಕ್ಷೆ:

ರೈಲ್ವೆ ಇಲಾಖೆಯ ಇತ್ತೀಚಿನ ಸುತ್ತೋಲೆಯ ಪ್ರಕಾರ, ‘ಜನ ವಿಶ್ವಾಸ್ (ಕಾನೂನು ನಿಬಂಧನೆಗಳ ತಿದ್ದುಪಡಿ) ಕಾಯ್ದೆ 2026’ ರ ಅಡಿಯಲ್ಲಿ ರೈಲ್ವೆ ಕಾಯ್ದೆಯ ಸೆಕ್ಷನ್ 145 ಕ್ಕೆ ಮಹತ್ವದ ತಿದ್ದುಪಡಿ ತರಲಾಗಿದೆ. ಇದರನ್ವಯ:

ರೈಲು ನಿಲ್ದಾಣಗಳಲ್ಲಿ ಅಥವಾ ರೈಲಿನ ಒಳಗಡೆ ಮೊಬೈಲ್ ಸ್ಪೀಕರ್ ಆನ್ ಮಾಡಿ ಹಾಡು ಕೇಳುವುದು, ವಿಡಿಯೋ ನೋಡುವುದು ಅಥವಾ ಜೋರಾಗಿ ಫೋನ್‌ನಲ್ಲಿ ಮಾತನಾಡಿ ಸಾರ್ವಜನಿಕರಿಗೆ ಉಪಟಳ ನೀಡಿದರೆ ಮೊದಲ ಬಾರಿಗೆ ₹1,000 ದಂಡ ವಿಧಿಸಲಾಗುತ್ತದೆ ಹಾಗೂ ರೈಲಿನಿಂದ ಕೆಳಗಿಳಿಸಿ ಟಿಕೆಟ್ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಒಂದು ವೇಳೆ ರೈಲ್ವೆ ಅಧಿಕಾರಿಗಳು ಅಥವಾ ಟಿಕೆಟ್ ಪರೀಕ್ಷಕರು (TTE) ಎಚ್ಚರಿಕೆ ನೀಡಿದ ಮೇಲೆಯೂ ಪ್ರಯಾಣಿಕರು ತಮ್ಮ ಪುಂಡಾಟಿಕೆಯನ್ನು ಮುಂದುವರಿಸಿದರೆ, ಅಂತಹವರಿಗೆ ₹5,000 ವರೆಗೆ ಭಾರಿ ದಂಡ ಹಾಗೂ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ಒಟ್ಟಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ

ರಾತ್ರಿ ವೇಳೆ ಕಟ್ಟುನಿಟ್ಟಿನ ನಿಯಮ:

ವಿಶೇಷವಾಗಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ರಾತ್ರಿ ಪ್ರಯಾಣಿಕರು ಮಲಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ರಿಂಗ್‌ಟೋನ್ ಜೋರಾಗಿ ಇಡುವಂತಿಲ್ಲ ಹಾಗೂ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಪ್ರಯಾಣಿಕರು ಕಡ್ಡಾಯವಾಗಿ ಇಯರ್‌ಫೋನ್ ಅಥವಾ ಹೆಡ್‌ಫೋನ್‌ಗಳನ್ನು ಬಳಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ನಿಯಮಗಳ ಬಗ್ಗೆ ಪ್ರಾದೇಶಿಕ ಭಾಷೆಗಳು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿಲ್ದಾಣಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಲು ಸೂಚಿಸಲಾಗಿದೆ. ಸಹಪ್ರಯಾಣಿಕರಿಂದ ತೊಂದರೆಯಾದರೆ ತಕ್ಷಣವೇ ‘ರೈಲ್ ಮದದ್’ (RailMadad) ಆ್ಯಪ್ ಅಥವಾ ಸಿಬ್ಬಂದಿ ಮೂಲಕ ದೂರು ನೀಡಲು ಅವಕಾಶವಿದೆ.

 


Share this with Friends

Related Post