Fri. Oct 23rd, 2026

ಗೃಹ ಜ್ಯೋತಿ ಮನೆ-ಮನೆ ಸಮೀಕ್ಷೆ ಅಕ್ಟೋಬರ್ 31ಕ್ಕೆ ಅಂತ್ಯ: ಗಡುವು ವಿಸ್ತರಣೆ ಇಲ್ಲವೆಂದ ಬೆಸ್ಕಾಂ

Griha Jyoti beneficiaries
Share this with Friends

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷಾ ಪ್ರಕ್ರಿಯೆಯು ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದ್ದು, ಇನ್ನು ಮುಂದೆ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು ತಕ್ಷಣವೇ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ಸಮೀಕ್ಷೆಯ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿದ್ದ ಕಾರಣ ಅಥವಾ ಮನೆ ಖಾಲಿ ಇದ್ದಿದ್ದರಿಂದಾಗಿ ಮಾಹಿತಿ ನೀಡಲು ಸಾಧ್ಯವಾಗದ ಗ್ರಾಹಕರಿಗೆ ರಾಜ್ಯ ಸರ್ಕಾರವು ಮತ್ತೊಂದು ವಿಶೇಷ ಅವಕಾಶ ಕಲ್ಪಿಸಿದೆ. ಇಂತಹ ಗ್ರಾಹಕರು ತಾವೇ ಖುದ್ದಾಗಿ ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದಾಗಿದೆ. ದಾಖಲಾತಿ ನೀಡಲು ಇದು ಕೊನೆಯ ಅವಕಾಶವಾಗಿದ್ದು, ತಪ್ಪಿದಲ್ಲಿ ಯೋಜನೆಯ ಸೌಲಭ್ಯಕ್ಕೆ ತೊಂದರೆಯಾಗಬಹುದು ಎಂದು ಬೆಸ್ಕಾಂ ಎಚ್ಚರಿಸಿದೆ.

ಶೇಕಡಾ 98.49ರಷ್ಟು ಸಮೀಕ್ಷೆ ಪೂರ್ಣ:

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ಗ್ರಾಹಕರಿದ್ದಾರೆ. ಈ ಪೈಕಿ ಅಕ್ಟೋಬರ್ 22ರ ವೇಳೆಗೆ ಈಗಾಗಲೇ 73,17,687 (ಶೇ. 98.49) ಗ್ರಾಹಕರ ಮನೆಗಳ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮೀಕ್ಷೆ ನಡೆಸುವಾಗ ಬೀಗ ಹಾಕಿರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೂ ಸಿಗದ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಸಂದೇಶಗಳನ್ನು (SMS) ಸಹ ಕಳುಹಿಸಲಾಗಿದೆ. ನಿಯಮದ ಪ್ರಕಾರ ಅಕ್ಟೋಬರ್ 31ರ ಒಳಗಾಗಿ ಈ ಪ್ರಕ್ರಿಯೆ ಮುಗಿಯಬೇಕಿರುವುದರಿಂದ ಬಾಕಿ ಇರುವ ಗ್ರಾಹಕರು ಕೂಡಲೇ ಸ್ಪಂದಿಸಬೇಕಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ವಿನಂತಿಸಿದೆ.

 


Share this with Friends

Related Post