Fri. Oct 23rd, 2026

ಶಿವಮೊಗ್ಗ ದಸರಾ ಆನೆ ಬೆದರಿದ ಘಟನೆ: ವೈಜ್ಞಾನಿಕ ವರದಿ ಬಳಿಕ ಕ್ರಮ- ಸಚಿವ ಮಧು ಬಂಗಾರಪ್ಪ

Share this with Friends

ಬೆಂಗಳೂರು: ಶಿವಮೊಗ್ಗ ದಸರಾ ಉತ್ಸವದ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ಏಕಾಏಕಿ ಗಾಬರಿಯಾಗಿ ಓಡಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆನೆ ಬೆದರಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬ್ಯಾಂಡ್ ವಾದ್ಯಗಳ ಭಾರಿ ಶಬ್ದ ಹಾಗೂ ನೆರೆದಿದ್ದ ಜನಸ್ತೋಮವನ್ನು ಕಂಡು ಆನೆ ಗಾಬರಿಯಾಗಿರಬಹುದು. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ” ಎಂದರು. ಘಟನೆ ಕುರಿತು ಸಂಪೂರ್ಣ ವೈಜ್ಞಾನಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ಬಂದ ನಂತರವೇ ಮುಂದಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮೈಸೂರು ದಸರಾ ವಿವಾದಕ್ಕೆ ಪ್ರತಿಕ್ರಿಯೆ:

ಮೈಸೂರು ದಸರಾ ವೇಳೆ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಮೂವರು ಸಚಿವರನ್ನು ಪೊಲೀಸ್ ವರಿಷ್ಠಾಧಿಕಾರಿಗಳು ತಡೆದಿದ್ದಾರೆ ಎನ್ನಲಾದ ವಿವಾದದ ಕುರಿತು ಮಾತನಾಡಿದ ಸಚಿವರು, “ಬಿಜೆಪಿಯವರು ಇದನ್ನು ದಲಿತ ಸಚಿವರಿಗೆ ಮಾಡಿದ ಅಪಮಾನ ಎಂದು ರಾಜಕೀಯಗೊಳಿಸುತ್ತಿದ್ದಾರೆ. ಸಚಿವರು ದಲಿತರಾಗಿರುವುದು ಕಾಕತಾಳೀಯ ಇರಬಹುದು, ಆದರೆ ಯಾವುದೇ ಸಚಿವರಿಗೂ ಇಂತಹ ಪರಿಸ್ಥಿತಿ ಬರಬಾರದು. ಮುಖ್ಯಮಂತ್ರಿಯವರು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ” ಎಂದು ಹೇಳಿದರು.

ಭಾರತ್ ಜೋಡೋ 2.0 ಹಾಗೂ ಪ್ರತಿಭಟನೆ:

ಕಾಂಗ್ರೆಸ್ ಪಕ್ಷದ ಹೋರಾಟಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದ ಮಧು ಬಂಗಾರಪ್ಪ, ಮತಗಳ್ಳತನದ ಆರೋಪದ ವಿರುದ್ಧ ಮುಂದಿನ ತಿಂಗಳು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಅದರಲ್ಲಿ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

 


Share this with Friends

Related Post