ಬೆಂಗಳೂರು: ರಾಜ್ಯದಲ್ಲಿ ಉದ್ಯಮ ಮತ್ತು ತಂತ್ರಜ್ಞಾನ ವಲಯವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಂಬರುವ ‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027’ ರಲ್ಲಿ ಪೋಲೆಂಡ್ ದೇಶವನ್ನು ಪಾಲುದಾರ ರಾಷ್ಟ್ರವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಇದೇ ವೇಳೆ ಪೋಲೆಂಡಿನ ಪ್ರಸಿದ್ಧ TZMO ಗ್ರೂಪ್ ರಾಜ್ಯದಲ್ಲಿ ₹80 ಕೋಟಿ ಹೂಡಿಕೆ ಮಾಡಲು ಪ್ರಸ್ತಾಪಿಸಿದ್ದು, ಇದರಿಂದ ಕರ್ನಾಟಕದಲ್ಲಿ ಸುಮಾರು 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಭಾರತ-ಪೋಲೆಂಡ್ ಬಿಸಿನೆಸ್ ಮೀಟಿಂಗ್‌ನಲ್ಲಿ ಪೋಲೆಂಡ್ ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಹಾಗೂ ಅವರ ದೇಶದ ಉನ್ನತ ನಿಯೋಗವನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕೋಲಾರದ ವೇಮಗಲ್‌ನಲ್ಲಿ ಮೊದಲ ಬಾರಿ ‘ಸ್ಮಾರ್ಟ್ ಪ್ಯಾಡ್’ ತಯಾರಿಕೆ:
ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ 5 ಎಕರೆ ಜಾಗದಲ್ಲಿ TZMO ಗ್ರೂಪ್ ಈ ₹80 ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಈ ಯೋಜನೆಯ ಮೂಲಕ ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ‘ಸ್ಮಾರ್ಟ್ ಅಡಲ್ಟ್ ಇನ್ಕಾಂಟಿನೆನ್ಸ್ ಪ್ಯಾಡ್‌ಗಳ’ ತಯಾರಿಕಾ ಘಟಕ ಪ್ರಾರಂಭವಾಗಲಿದೆ. ಇದು ಸ್ಥಳೀಯವಾಗಿ ಒಂದು ಸಾವಿರ ಜನರಿಗೆ ಗುಣಮಟ್ಟದ ಉದ್ಯೋಗಾವಕಾಶ ತಂದುಕೊಡಲಿದೆ.
ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್:
ಕೃತಕ ಬುದ್ಧಿಮತ್ತೆ (AI), ಗೇಮಿಂಗ್ ಮತ್ತು ಡಿಪ್-ಟೆಕ್ ನಾವೀನ್ಯತೆಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಕಟೋವಿಸ್ ಮತ್ತು Kato.hub ನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯೊಂದಿಗೆ ಒಪ್ಪಂದ ಪತ್ರಕ್ಕೆ (LoI) ಸಹಿ ಹಾಕಲಾಗಿದೆ. ಇದರ ಭಾಗವಾಗಿ ‘ಕರ್ನಾಟಕ-ಕಟೋವಿಸ್ ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್’ ಸ್ಥಾಪನೆಯಾಗಲಿದ್ದು, ಇದು ಉಭಯ ದೇಶಗಳ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಹೊಸ ಮಾರುಕಟ್ಟೆ ವಿಸ್ತರಿಸಲು ನೆರವಾಗಲಿದೆ.
ಬೆಂಗಳೂರಿನ ಹೊರಗೂ ಹೂಡಿಕೆಗೆ ಮುಕ್ತ ಅವಕಾಶ:
ರಾಜ್ಯದಲ್ಲಿ ವಿದೇಶಿ ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಾಗತಿಕ ಹೂಡಿಕೆ ಮತ್ತು ಸಾಗರೋತ್ತರ ವ್ಯವಹಾರಗಳ ಪ್ರತ್ಯೇಕ ಇಲಾಖೆಯನ್ನೇ ಆರಂಭಿಸಲಾಗಿದೆ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಪೋಲಿಷ್ ಕಂಪನಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಹೂಡಿಕೆ ಮಾಡುವಂತೆ ಕರೆ ನೀಡಿದರು. ಮಾಹಿತಿ ತಂತ್ರಜ್ಞಾನದ ಜೊತೆಗೆ ಈಗ ಎಐ (AI) ತಂತ್ರಜ್ಞಾನ ಮತ್ತು ಸುಸ್ಥಿರ ಹಸಿರು ಇಂಧನ ವಲಯಕ್ಕೆ ರಾಜ್ಯ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

