ಬೆಂಗಳೂರು: ನಗರದ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಲಿಸುವ ಮೆಟ್ರೋ ರೈಲಿನಲ್ಲಿ ತಂಗಿಯ ವಯಸ್ಸಿನ ಯುವತಿಯೊಬ್ಬಳನ್ನು ರಹಸ್ಯವಾಗಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಸ್ವತಃ ಆ ಯುವತಿಯೇ ಧೈರ್ಯದಿಂದ ರೆಡ್ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಮೆಟ್ರೋ ಭದ್ರತಾ ಸಿಬ್ಬಂದಿ ಸಮ್ಮುಖದಲ್ಲೇ ಆರೋಪಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ವೈಟ್ಫೀಲ್ಡ್-ಕಾಡುಗೋಡಿ ಮೆಟ್ರೋ ನಿಲ್ದಾಣದ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋ ಭಾರಿ ವೈರಲ್ ಆಗಿದೆ.
ಘಟನೆಯ ವಿವರ:
ಬೆಂಗಳೂರಿನ ಟ್ರಾವೆಲ್ ಮತ್ತು ಲೈಫ್ಸ್ಟೈಲ್ ಕ್ರಿಯೇಟರ್ ಆಗಿರುವ ಸೌಪಿಕಾ ಎಂಬ ಯುವತಿ ಸಂಜೆ 4:30ರ ಸುಮಾರಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಹಪ್ರಯಾಣಿಕನೊಬ್ಬ ತನ್ನ ಮೊಬೈಲ್ ಫೋನ್ ಮೂಲಕ ಯುವತಿಯ ಅನುಮತಿಯಿಲ್ಲದೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಯುವತಿ, ಆತನ ಬಳಿ ತೆರಳಿ ನೇರವಾಗಿ ಪ್ರಶ್ನಿಸಿದ್ದಾರೆ. ತೀವ್ರ ಗಾಬರಿ ಹಾಗೂ ಆತಂಕದ ನಡುವೆಯೂ ಧೈರ್ಯ ಪ್ರದರ್ಶಿಸಿದ ಯುವತಿ, ಆತನ ಕೈಯಿಂದ ಮೊಬೈಲ್ ಕಸಿದುಕೊಂಡು ಲಾಕ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ.
ಭದ್ರತಾ ಸಿಬ್ಬಂದಿ ಸಮ್ಮುಖದಲ್ಲೇ ಎಸ್ಕೇಪ್:
ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಯುವತಿ ಮೆಟ್ರೋ ಭದ್ರತಾ ಸಿಬ್ಬಂದಿಯ ಸಹಾಯ ಕೋರಿದ್ದಾರೆ. ಈ ವೇಳೆ ಆರೋಪಿಯು ಮೊಬೈಲ್ ಅನ್ಲಾಕ್ ಮಾಡಿ ತೋರಿಸುವಂತೆ ನಟಿಸಿ, ಹಠಾತ್ತನೆ ಯುವತಿ ಹಾಗೂ ಭದ್ರತಾ ಸಿಬ್ಬಂದಿಯ ಕೈಯಿಂದ ಫೋನ್ ಕಸಿದುಕೊಂಡು ನಿಲ್ದಾಣದಿಂದ ಓಡಿಹೋಗಿ ಪರಾರಿಯಾಗಿದ್ದಾನೆ. ಆರೋಪಿ ವಾಗ್ವಾದ ನಡೆಸುತ್ತಿದ್ದ ದೃಶ್ಯಗಳನ್ನು ಯುವತಿ ಕೂಡ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಆ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು:
ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಿರುಕುಳ ನಡೆದಾಗ ಮಹಿಳೆಯರು ಧೈರ್ಯಗೆಡದೆ ಧ್ವನಿ ಎತ್ತಬೇಕು, ಪೊಲೀಸರು ನಮಗೆ ನೆರವಾಗುತ್ತಾರೆ” ಎಂದು ಯುವತಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಮೆಟ್ರೋ ರೈಲಿನೊಳಗೆ ಇಂತಹ ಘಟನೆ ನಡೆದಿರುವುದು ಪ್ರಯಾಣಿಕರ, ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಕುರಿತು ತೀವ್ರ ಕಳವಳ ಮೂಡಿಸಿದೆ.

