Wed. Oct 28th, 2026

ಪರಿಷತ್ ಚುನಾವಣೆ ಗೆಲುವು ಸರ್ಕಾರದ ದುರಾಡಳಿತಕ್ಕೆ ಮತದಾರರು ನೀಡಿದ ಕಪಾಳಮೋಕ್ಷ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

Share this with Friends

ನವದೆಹಲಿ: ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣಾ ಫಲಿತಾಂಶವು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಭ್ರಷ್ಟ ನೀತಿಗಳು, ದುರಾಡಳಿತ ಮತ್ತು ರೈತ ವಿರೋಧಿ ಧೋರಣೆಗಳಿಗೆ ಪ್ರಜ್ಞಾವಂತ ಮತದಾರರು ನೀಡಿದ ನೇರ ಕಪಾಳಮೋಕ್ಷವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳ ಅಭೂತಪೂರ್ವ ಜಯವು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹೋರಾಟಕ್ಕೆ ನಾಡಿನ ಜನತೆ ನೀಡಿರುವ ಆಶೀರ್ವಾದ ಹಾಗೂ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಬಣ್ಣಿಸಿದ್ದಾರೆ. 2028ರಲ್ಲೂ ತಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಬೀಗುತ್ತಿದ್ದ ಆಡಳಿತ ಪಕ್ಷದ ನಾಯಕರ ಅಹಂಕಾರವನ್ನು ಮತದಾರರು ಮಣ್ಣುಪಾಲು ಮಾಡಿದ್ದಾರೆ ಎಂದಿದ್ದಾರೆ.

ಸರ್ಕಾರದ ಹಗರಣಗಳ ವಿರುದ್ಧ ಜನರ ಆಕ್ರೋಶ:

ದಿನನಿತ್ಯ ಬಾಯಿಮಾತಿನ ಭರವಸೆಗಳಿಗಷ್ಟೇ ಸೀಮಿತವಾಗಿರುವ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ. ಬಿಡದಿಯ ರೈತ ವಿರೋಧಿ ಭೂಸ್ವಾಧೀನ ನೀತಿ, ನೈಸ್ (BMIC) ಯೋಜನೆಯ ಅಕ್ರಮಗಳು, ಕೆಪಿಎಸ್‌ಸಿ ಪರೀಕ್ಷಾ ಹಗರಣಗಳು, ಯುವಜನತೆಗೆ ಮಾಡಿದ ವಂಚನೆ ಹಾಗೂ ಸ್ವತಃ ಸರ್ಕಾರದ ಪ್ರಮುಖರೇ ಹುಟ್ಟುಹಾಕಿದ ಸ್ಟಿಂಗ್ ಆಪರೇಷನ್ ಪ್ರಕರಣಗಳ ವಿರುದ್ಧ ಮತದಾರರು ತಮ್ಮ ಆಕ್ರೋಶವನ್ನು ಮತಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೋದಿ-ದೇವೇಗೌಡರ ನಾಯಕತ್ವಕ್ಕೆ ಸಂದ ಜಯ:

ದೇಶದ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ, ವರ್ಚಸ್ಸು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಮೇಲಿನ ಜನರ ಒಲವು ಈ ಗೆಲುವಿಗೆ ಪ್ರಮುಖ ಅಡಿಪಾಯವಾಗಿದೆ. ಉಭಯ ಪಕ್ಷಗಳ ನಡುವೆ ಗಟ್ಟಿಯಾದ ಸಮನ್ವಯತೆ ಮೂಡಿಸಲು ಶ್ರಮಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯವೈಖರಿಯನ್ನು ಸಚಿವರು ಶ್ಲಾಘಿಸಿದ್ದಾರೆ. ಜಯಭೇರಿ ಬಾರಿಸಿದ ಶಶೀಲ್ ನಮೋಶಿ, ಎಸ್.ವಿ. ಸಂಕನೂರು, ಕೆ.ಎಂ. ಸುರೇಶ್ ಹಾಗೂ ಎ.ಪಿ. ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, 2028ರಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ತರಲು ಜನ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

 

 


Share this with Friends

Related Post