Wed. Oct 28th, 2026

ವಿಧಾನ ಪರಿಷತ್ ಚುನಾವಣೆ ಸೋಲು: ಕಾಂಗ್ರೆಸ್‌ಗೆ ಗಂಭೀರ ಆತ್ಮಾವಲೋಕನದ ಸಂದರ್ಭ; ಬಿ.ಕೆ. ಹರಿಪ್ರಸಾದ್

Share this with Friends

ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ನಿರೀಕ್ಷೆಗೆ ವಿರುದ್ಧವಾಗಿ ಬಂದಿದ್ದು, ಇದನ್ನು ಕೇವಲ ಚುನಾವಣಾ ಹಿನ್ನಡೆಯಾಗಿ ಪರಿಗಣಿಸದೆ ಗಂಭೀರ ಆತ್ಮಾವಲೋಕನದ ಸಂದರ್ಭವಾಗಿ ಸ್ವೀಕರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು, ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷ ಜಯ ಸಾಧಿಸಲಿದೆ ಎಂಬ ವಿಶ್ವಾಸವಿತ್ತು. ಆದರೆ ಮತದಾರರ ತೀರ್ಪು ಬೇರೆಯದೇ ಆಗಿದೆ. ಈ ಹಿನ್ನಡೆಯ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಪಕ್ಷದ ಎಲ್ಲ ಹಂತಗಳಲ್ಲಿ ಸಮಗ್ರ ಪರಾಮರ್ಶೆ ನಡೆಸಲಾಗುವುದು ಎಂದಿದ್ದಾರೆ.

ಪ್ರಜ್ಞಾವಂತ ಮತದಾರರ ನಿರೀಕ್ಷೆ ತಲುಪಲು ವಿಫಲ:

ಶಿಕ್ಷಕರು ಮತ್ತು ಪದವೀಧರರು ಸಮಾಜದ ಪ್ರಜ್ಞಾವಂತ ವರ್ಗವಾಗಿದ್ದು, ಅವರ ರಾಜಕೀಯ ನಿಲುವುಗಳಿಗೆ ವಿಶೇಷ ಮಹತ್ವವಿದೆ. ಈ ಚುನಾವಣೆಯಲ್ಲಿ ಅವರ ವಿಶ್ವಾಸ ಗಳಿಸಲು ಸಾಧ್ಯವಾಗದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಮತದಾರರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ, ಪಕ್ಷದ ನಿಲುವುಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸುವಲ್ಲಿ ಆಗಿರುವ ಕೊರತೆಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಉದ್ಯೋಗದ ಅಭದ್ರತೆ, ಶೈಕ್ಷಣಿಕ ಸವಾಲುಗಳು ಸೇರಿದಂತೆ ಶಿಕ್ಷಕರು ಮತ್ತು ಪದವೀಧರರ ವೃತ್ತಿಪರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದಿಸಿದೆ ಎಂಬುದನ್ನು ತಾವೀಗ ಅವಲೋಕಿಸಬೇಕಿದೆ. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಆಗಿರುವ ನ್ಯೂನತೆಗಳನ್ನು ಶೀಘ್ರದಲ್ಲೇ ಸರಿಪಡಿಸಿಕೊಳ್ಳಲಾಗುವುದು ಎಂದು ಹರಿಪ್ರಸಾದ್ ಭರವಸೆ ನೀಡಿದ್ದಾರೆ.

ಸಂಘಟನೆ ಬಲಪಡಿಸಲು ಬದ್ಧತೆ:

ಈ ಸೋಲಿನಿಂದ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹಾಗೂ ಜನಪರ ಬದ್ಧತೆ ದುರ್ಬಲಗೊಳ್ಳುವುದಿಲ್ಲ. ಬದಲಿಗೆ ಸಂಘಟನಾ ಕಾರ್ಯವೈಖರಿ, ಜನಸಂಪರ್ಕ ಹಾಗೂ ರಾಜಕೀಯ ಕಾರ್ಯತಂತ್ರಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ. ಮತದಾರರ ತೀರ್ಪನ್ನು ಗೌರವದಿಂದ ಸ್ವೀಕರಿಸುವುದಾಗಿ ಹೇಳಿದ ಅವರು, ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕಳೆದುಹೋದ ವಿಶ್ವಾಸವನ್ನು ಮರಳಿ ಗಳಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.

 

 


Share this with Friends

Related Post