Wed. Oct 28th, 2026

ಬೆಂಗಳೂರು ಕಸದ ಸಮಸ್ಯೆಗೆ ಮುಕ್ತಿ: 6 ತಿಂಗಳಲ್ಲಿ ಹೊಸ ತಂತ್ರಜ್ಞಾನ ಆಧಾರಿತ ತ್ಯಾಜ್ಯ ವ್ಯವಸ್ಥೆ ಜಾರಿ..!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೇ ಮಾದರಿಯ ತ್ಯಾಜ್ಯ ವಿಲೇವಾರಿ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿ, ಮುಂದಿನ 6 ತಿಂಗಳ ಅವಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರಕಟಿಸಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತ ಪ್ರಮುಖ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ನಗರದ 27 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ 33 ಹೊಸ ಟೆಂಡರ್ ಪ್ಯಾಕೇಜ್‌ಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆ: ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಕಸದ ಬ್ಲಾಕ್ ಸ್ಪಾಟ್‌ಗಳನ್ನು (ಬೀದಿ ಬದಿಯ ಕಸದ ರಾಶಿಗಳು) ಸಂಪೂರ್ಣವಾಗಿ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪ್ರಮುಖ ರಸ್ತೆಗಳ ಬದಿಗಳಲ್ಲಿ ಬಿದ್ದಿರುವ ಕಟ್ಟಡ ಅವಶೇಷಗಳು (Debris) ಹಾಗೂ ಕಸವನ್ನು ವಿಶೇಷ ಆಂದೋಲನದ ಮೂಲಕ ತಕ್ಷಣವೇ ಸ್ವಚ್ಛಗೊಳಿಸಲಾಗುವುದು ಎಂದರು.

ಮನೆ ಮನೆಗೆ ಜಿಪಿಎಸ್ ವಾಹನ: ನಗರದ ಪ್ರತಿ ಮನೆಗೂ ಕಸ ಸಂಗ್ರಹಣಾ ವಾಹನಗಳು ತಲುಪುವುದನ್ನು ಕಡ್ಡಾಯಗೊಳಿಸಲಾಗುವುದು. ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ಜಿಪಿಎಸ್ ಆಧಾರಿತ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪೌರಕಾರ್ಮಿಕರ ಪಾರದರ್ಶಕ ಹಾಜರಾತಿಗಾಗಿ ಮುಖ ಗುರುತಿಸುವಿಕೆ (Face Recognition) ತಂತ್ರಜ್ಞಾನ ಅಳವಡಿಸಲಾಗುವುದು ಎಂದರು.

ವಿಂಗಡಿಸದಿದ್ದರೆ ಕಸ ಪಡೆಯಲ್ಲ: ಸಾರ್ವಜನಿಕರು ಕಡ್ಡಾಯವಾಗಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿಯೇ ನೀಡಬೇಕು. ಕಸ ವಿಂಗಡಣೆ ಮಾಡದಿದ್ದರೆ ಸ್ವಚ್ಛತಾ ಸಿಬ್ಬಂದಿ ಅದನ್ನು ಸ್ವೀಕರಿಸುವುದಿಲ್ಲ. ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ (Compost) ಪರಿವರ್ತಿಸಲು ಪ್ರತ್ಯೇಕ ಪ್ಲಾಂಟ್‌ಗಳಿಗೆ ರವಾನಿಸಲಾಗುತ್ತದೆ ಎಂದರು.

ರಸ್ತೆಯಲ್ಲಿ ಕಸ ಹಾಕಿದರೆ ಡಬಲ್ ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಾರ್ಷಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ರಸ್ತೆ ಬದಿಯಲ್ಲಿ ಕಸ ಹಾಕಿ ಸಿಕ್ಕಿಬಿದ್ದರೆ ದುಪ್ಪಟ್ಟು ದಂಡ ವಿಧಿಸುವುದರ ಜೊತೆಗೆ, ಅವರ ಕೈಯಿಂದಲೇ ಆ ಜಾಗವನ್ನು ಸ್ವಚ್ಛಗೊಳಿಸುವ ಕಠಿಣ ನಿಯಮ ಜಾರಿಗೆ ತರಲಾಗುವುದು‌ ಎಂದರು.

ನವೆಂಬರ್‌ನಿಂದಲೇ ಆರಂಭ:

ಈಗಾಗಲೇ 5 ಪ್ರಮುಖ ಪ್ಯಾಕೇಜ್‌ಗಳಿಗೆ ಕಾರ್ಯಾದೇಶ (Work Order) ನೀಡಲಾಗಿದ್ದು, ನವೆಂಬರ್ 2026 ರಿಂದಲೇ ಪ್ರಾಯೋಗಿಕವಾಗಿ ನೂತನ ಹೈಟೆಕ್ ಕಾರ್ಯಾಚರಣೆಗಳು ಆರಂಭವಾಗಲಿವೆ ಎಂದು ಸಚಿವರು ವಿವರಿಸಿದರು. ಸಾರ್ವಜನಿಕರು ಮಹಡಿ ತೋಟ (Terrace Gardening) ಹಾಗೂ ಮನೆಗಳಲ್ಲೇ ಕಾಂಪೋಸ್ಟ್ ತಯಾರಿಕೆಗೆ ಆದ್ಯತೆ ನೀಡಬೇಕು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೃಷ್ಣ ಬೈರೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

 


Share this with Friends

Related Post