Wed. Oct 28th, 2026

ಚಿತ್ರದುರ್ಗದಲ್ಲಿ ಅಕ್ಟೋಬರ್ 31 ರಿಂದ ಸೇನಾ ಅಗ್ನಿವೀರ್ ನೇಮಕಾತಿ ರ‍್ಯಾಲಿ; 14 ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ

Share this with Friends

ಚಿತ್ರದುರ್ಗ: ಭಾರತೀಯ ಸೇನೆಯ ವತಿಯಿಂದ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 3 ರವರೆಗೆ ನಾಲ್ಕು ದಿನಗಳ ಕಾಲ ಅಗ್ನಿವೀರ್ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

ರ‍್ಯಾಲಿಯಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳ ಕುರಿತು ನೇಮಕಾತಿ ಪ್ರಕ್ರಿಯೆಯ ಉಸ್ತುವಾರಿ ವಹಿಸಿರುವ ಕರ್ನಲ್ ಪುಷ್ಪರಾಜ್  ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರಂತೆ‌ ಅಗ್ನಿವೀರ್ ಸಾಮಾನ್ಯ ಕರ್ತವ್ಯ (GD), ತಾಂತ್ರಿಕ (Technical) ಹಾಗೂ ಟ್ರೇಡ್ಸ್‌ಮನ್ ವರ್ಗಗಳ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು, ಬೆಂಗಳೂರು ನಗರ, ಗ್ರಾಮೀಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಒಟ್ಟು 14 ಜಿಲ್ಲೆಗಳ 957 ಅರ್ಹ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 31 ರಂದು 543 ಹಾಗೂ ನವೆಂಬರ್ 1 ರಂದು 414 ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ತಪಾಸಣೆ ಮತ್ತು ಶೈಕ್ಷಣಿಕ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದರು.

ಅಭ್ಯರ್ಥಿಗಳಿಗೆ ಪ್ರಮುಖ ಮಾರ್ಗಸೂಚಿಗಳು:

ವರದಿ ಮಾಡಿಕೊಳ್ಳುವುದು: ರ‍್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ (Admit Card) ಸೂಚಿಸಿರುವ ನಿಗದಿತ ದಿನಾಂಕ ಮತ್ತು ಸಮಯದ ಒಳಗೆ ಕ್ರೀಡಾಂಗಣದ ಮಾರ್ಷಲಿಂಗ್ ಪ್ರದೇಶಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.

ದಾಖಲೆಗಳ ಪರಿಶೀಲನೆ: ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಎಲ್ಲಾ ಶೈಕ್ಷಣಿಕ ಹಾಗೂ ಇತರೆ ಮೂಲ ದಾಖಲಾತಿಗಳನ್ನು ಮತ್ತು ಅವುಗಳ ಜೆರಾಕ್ಸ್ ಪ್ರತಿಗಳನ್ನು ತರಬೇಕು. ತಪ್ಪು ದಾಖಲೆಗಳನ್ನು ನೀಡಿದರೆ ಅಥವಾ ದಾಖಲೆಗಳು ಇಲ್ಲದಿದ್ದರೆ ಅಭ್ಯರ್ಥಿತ್ವವನ್ನು ತಕ್ಷಣವೇ ರದ್ದುಪಡಿಸಲಾಗುವುದು.

ಡ್ರಗ್ಸ್ ಟೆಸ್ಟ್ ಕಡ್ಡಾಯ: ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯಾವುದೇ ರೀತಿಯ ಮಾದಕ ದ್ರವ್ಯಗಳು ಅಥವಾ ನಶೆ ತರುವ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರ‍್ಯಾಲಿ ಸ್ಥಳದಲ್ಲೇ ಅಭ್ಯರ್ಥಿಗಳಿಗೆ ಮಾದಕ ದ್ರವ್ಯ ಪತ್ತೆ ಪರೀಕ್ಷೆ (Drug Test) ನಡೆಸಲಾಗುವುದು.

ಮಧ್ಯವರ್ತಿಗಳ ಬಗ್ಗೆ ಎಚ್ಚರ: ಸೇನಾ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಕೇವಲ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಲಸ ಕೊಡಿಸುವುದಾಗಿ ನಂಬಿಸುವ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳ ಆಮಿಷಕ್ಕೆ ಯಾರೂ ಬಲಿಯಾಗಬಾರದು ಹಾಗೂ ಯಾವುದೇ ಹಣದ ವ್ಯವಹಾರ ನಡೆಸಬಾರದು.

ಅಭ್ಯರ್ಥಿಗಳು ರ‍್ಯಾಲಿಗೆ ಬರುವಾಗ ಸೂಕ್ತ ಕ್ರೀಡಾ ಉಡುಪು ಮತ್ತು ಪಾದರಕ್ಷೆಗಳನ್ನು ಧರಿಸಿರಬೇಕು. ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಸೇನೆಯ ಜಾಲತಾಣ www.joinindianarmy.nic.in ಅನ್ನು ವೀಕ್ಷಿಸಬಹುದು ಅಥವಾ ಸೇನಾ ನೇಮಕಾತಿಯ ಅಧಿಕೃತ ವಾಟ್ಸ್ಪ್ ಚಾನೆಲ್ ಅನ್ನು ಫಾಲೋ ಮಾಡಬಹುದು ಎಂದು ಕರ್ನಲ್ ಪುಷ್ಪರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share this with Friends

Related Post