Mon. Nov 2nd, 2026

ಮೊಸರು ದರ ಇಳಿಸಿ: ಕೆಎಂಎಫ್‌ಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

Share this with Friends

ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಲ (ಕೆಎಂಎಫ್) ವತಿಯಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ಬೆಲೆಯನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.

ವಿವಿಧ ಬಣ್ಣಗಳ ಹಾಲಿನ ದರ ವ್ಯತ್ಯಾಸದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೊಬ್ಬಿನಾಂಶ ಹೆಚ್ಚಿರುವ ಹಾಲಿನ ದರವನ್ನು ಮಾತ್ರ ಹೆಚ್ಚಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದರು. ನೀರಿನ ಬಾಟಲಿ ಬೆಲೆ ಹೆಚ್ಚಾದಾಗ ಯಾರೂ ಧ್ವನಿ ಎತ್ತುವುದಿಲ್ಲ, ಆದರೆ ಹಾಲಿನ ದರ ಹೆಚ್ಚಳದಿಂದ ರಾಜ್ಯದ 11 ಲಕ್ಷ ರೈತ ಕುಟುಂಬಗಳು ಹಾಗೂ 25 ಲಕ್ಷ ಹಾಲು ಮಾರಾಟಗಾರರಿಗೆ ನೇರ ಆರ್ಥಿಕ ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದರು. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ ಎಂದು ಕೆಎಂಎಫ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಬಸ್ ದರ ಏರಿಕೆ ನಿರ್ಧಾರ ಸಾರಿಗೆ ಇಲಾಖೆಗೆ:

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳು ಪ್ರತಿದಿನದ ಇಂಧನ ವೆಚ್ಚ ಭರಿಸಲು ಸಂಕಷ್ಟ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಅನುದಾನ ನೀಡಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಕಡಿಮೆ ಬಸ್ ಸಂಚಾರವಿರುವ ಮಾರ್ಗಗಳಲ್ಲಿ ಹೊಸ ಲೆಕ್ಕಾಚಾರದಡಿ ಬಸ್ ಓಡಿಸಲು ತೀರ್ಮಾನಿಸಲಾಗಿದ್ದು, ಪ್ರಯಾಣಿಕರ ಟಿಕೆಟ್ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಗುತ್ತಿಗೆದಾರರ ಬಾಕಿ ಬಿಡುಗಡೆಗೆ ಕ್ರಮ:

ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ರೂಪಾಯಿಗಳಷ್ಟು ಹಳೆಯ ಬಿಲ್ ಬಾಕಿ ಇರುವುದು ನಿಜ. ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಹಾಗೂ ಕಾವೇರಿ ನೀರಾವರಿ ಯೋಜನೆಯ ಕಾಮಗಾರಿಗಳ ಬಿಲ್‌ಗಳನ್ನು ಸರಿಪಡಿಸಲಾಗುತ್ತಿದೆ. ಗುತ್ತಿಗೆದಾರರ ಸಂಘದ ಪ್ರಮುಖ ಮೂರು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಇದೇ ವೇಳೆ, ಮುಂಬರುವ ಉಪಚುನಾವಣೆಯ ಸಿದ್ಧತೆಗಳ ಭಾಗವಾಗಿ ಮಂಗಳವಾರ ಹಿರಿಯೂರಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

 


Share this with Friends

Related Post