Thu. Nov 5th, 2026

“ನೋ ಡಾಟಾ, ಓನ್ಲಿ ಗಲಾಟಾ”: ರಾಹುಲ್ ಗಾಂಧಿ ವಿರುದ್ಧ ಡಾ. ಸಂಬಿತ್ ಪಾತ್ರಾ ವ್ಯಂಗ್ಯ

Share this with Friends

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಗೊಂದಲ ಮತ್ತು ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ ಆರೋಪಿಸಿದ್ದಾರೆ. ಮೃತಪಟ್ಟವರ ಹಾಗೂ ನಕಲಿ ಮತದಾರರ ಹೆಸರನ್ನು ಇಟ್ಟುಕೊಂಡು ಬೋಗಸ್ ಮತದಾನ ಮಾಡಲು ಸಂಚು ರೂಪಿಸಿದ್ದ ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ಗೆ ಈಗ ತಡೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಎಸ್‌ಐಆರ್ ಪ್ರಕ್ರಿಯೆ ಕುರಿತು ಬಿಜೆಪಿ ಯುವಜನರು ಮತ್ತು ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಸಂವಾದ ನಡೆಸುತ್ತಿದ್ದರೆ, ಕಾಂಗ್ರೆಸ್ ಬೀದಿಯಲ್ಲಿ ಗಲಾಟೆ ಮಾಡುತ್ತಿದೆ ಎಂದರು.

ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇಶದ ಪ್ರಮುಖ ವಿದ್ಯಮಾನಗಳ ಬಗ್ಗೆ ಯಾವುದೇ ಅಂಕಿ-ಅಂಶ ಅಥವಾ ನಿಖರ ಮಾಹಿತಿ ಇರುವುದಿಲ್ಲ, ಅವರದ್ದೇನಿದ್ದರೂ “ನೋ ಡಾಟಾ, ಓನ್ಲಿ ಗಲಾಟಾ” ಎಂದು ಸಂಬಿತ್ ಪಾತ್ರಾ ಲೇವಡಿ ಮಾಡಿದರು. ಸಂಸತ್ತಿನ ಕಲಾಪದಲ್ಲಿ ಐದಾರು ನಿಮಿಷವೂ ಶಾಂತವಾಗಿ ಕುಳಿತುಕೊಳ್ಳದ ಅವರು, ಪ್ರಧಾನಿ ಮೋದಿಯವರೊಂದಿಗೆ ಮುಖಾಮುಖಿ ಚರ್ಚೆ ಬಯಸುತ್ತಿರುವುದು ಹಾಸ್ಯಾಸ್ಪದ ಎಂದರು. ಇಂಡಿ ಒಕ್ಕೂಟದ ಒಳಗೇ ಗೊಂದಲಗಳಿದ್ದು, ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರೊಂದಿಗೆ ರಾಹುಲ್ ಸಂಬಂಧ ಏನಾಗಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಿ

ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಅವರೇ ಎಸ್‌ಐಆರ್ ಪ್ರಕ್ರಿಯೆಗೆ ನಮ್ಮ ಆಕ್ಷೇಪವಿಲ್ಲ, ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಕುಳಿತು ಮಾತನಾಡುವ ಬದಲು ಕರ್ನಾಟಕಕ್ಕೆ ಬಂದು ತಮ್ಮದೇ ಪಕ್ಷದ ಸಚಿವರ ಜೊತೆ ಚರ್ಚಿಸಲಿ ಎಂದು ಸಲಹೆ ನೀಡಿದರು. ದೆಹಲಿ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಅವರು ತಳ್ಳಿದ ರೀತಿ ಗಾಂಧಿ ಕುಟುಂಬದ ದುರಹಂಕಾರವನ್ನು ತೋರಿಸುತ್ತದೆ ಎಂದು ಪಾತ್ರಾ ಟೀಕಿಸಿದರು.

ಬಾಂಗ್ಲಾದೇಶಿ ಅಕ್ರಮ ವಲಸಿಗರ ರಕ್ಷಣೆ ಆರೋಪ

ಎಸ್‌ಐಆರ್ ಪ್ರಕ್ರಿಯೆಯಡಿ ಸುಮಾರು 3 ಕೋಟಿ ನಕಲಿ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ದಾಖಲೆ ನೀಡದವರ ಹೆಸರುಗಳನ್ನು ಕೈಬಿಡಲಾಗಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಹಾಗೂ ಪ್ರಿಯಾಂಕಾ ಗಾಂಧಿ ರೇಷನ್ ಕಾರ್ಡ್ ಕೊಡಿಸಿದ್ದರು ಎಂದು ಆರೋಪಿಸಿದ ಪಾತ್ರಾ, ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿತ್ತು ಎಂದು ದೂರಿದರು. ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ನೇಹಾ ಬೋರಾ ಈಗ ಕಾಂಗ್ರೆಸ್‌ನ ಹೊಸ ಮುಖವಾಗಿದ್ದು, ಅಕ್ರಮ ವಲಸಿಗರ ಪರವಾಗಿ ನಿಂತಿದ್ದಾರೆ ಎಂದು ಆಪಾದಿಸಿದರು.

ಇತ್ತೀಚೆಗೆ ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಕಾಂಗ್ರೆಸ್ಸಿಗರಿಗೆ ನಿಜವಾಗಿಯೂ ಮತಕಳವಿನ ಬಗ್ಗೆ ದಾಖಲೆಗಳಿದ್ದರೆ ಅದನ್ನು ಚುನಾವಣಾ ಆಯೋಗ ಅಥವಾ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿ ಎಂದು ಸವಾಲು ಹಾಕಿದರು.

 


Share this with Friends

Related Post