Sun. Nov 8th, 2026

ಬಿಜೆಪಿ ನಾಯಕರಿಗೆ ಯಾವುದೇ ಅನಾಹುತವಾದರೆ ಅದಕ್ಕೆ ಮುಖ್ಯಮಂತ್ರಿಯವರೇ ನೇರ ಹೊಣೆ: ಪ್ರತಿಪಕ್ಷ ನಾಯಕ ಆರ್. ಅಶೋಕ

Share this with Friends

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದ್ದು, ಬಿಜೆಪಿ ನಾಯಕರಿಗೆ ಯಾವುದೇ ಅನಾಹುತವಾದರೆ ಅದಕ್ಕೆ ಮುಖ್ಯಮಂತ್ರಿಯವರೇ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಮತ್ತೆ ‘ಲಾಂಗು, ಮಚ್ಚು’ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಮಾರಕಾಸ್ತ್ರಗಳನ್ನು ಕಳುಹಿಸಿ ಜೀವ ಬೆದರಿಕೆ ಒಡ್ಡಿರುವ ಘಟನೆಯನ್ನು ಪ್ರಸ್ತಾಪಿಸಿದ ಅವರು, ಪೊಲೀಸ್ ಆಯುಕ್ತರ ಕಚೇರಿ ಸಮೀಪದಲ್ಲೇ ಇದ್ದರೂ ಇಂತಹ ಕೃತ್ಯ ನಡೆದಿರುವುದು ಆತಂಕಕಾರಿ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರವು ಬರ ಪರಿಹಾರ ಮತ್ತು ರಸ್ತೆ ಗುಂಡಿ ಮುಚ್ಚುವಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಬೆದರಿಕೆ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು.

ಎಥೆನಾಲ್ ಪರೀಕ್ಷಿಸಲು ಲ್ಯಾಬ್ ಎಲ್ಲಿದೆ?:

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಕುರಿತಾದ ವಿವಾದಕ್ಕೆ ಪ್ರತಿಕ್ರಿಯಿಸಿದ ಅಶೋಕ, “ನಮ್ಮಲ್ಲಿ ಇದರ ಪ್ರಮಾಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಸೂಕ್ತ ಪ್ರಯೋಗಾಲಯಗಳೇ ಇಲ್ಲ. ಕೇಂದ್ರ ಸರ್ಕಾರವು ಇಂಧನ ಉಳಿತಾಯಕ್ಕಾಗಿ ಎಥೆನಾಲ್ ಮಿಶ್ರಣಕ್ಕೆ ವೈಜ್ಞಾನಿಕ ಕ್ರಮ ವಹಿಸಿದೆ. ಅದರ ಮೇಲೆ ಆರೋಪ ಮಾಡುವ ಮುನ್ನ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಹಾಲು, ಅಕ್ಕಿ ಕಲಬೆರಕೆ ಹಾಗೂ ಕಲುಷಿತ ಕುಡಿಯುವ ನೀರಿನ ಸರಬರಾಜನ್ನು ತಡೆಯಲಿ” ಎಂದು ಸವಾಲು ಹಾಕಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ ಅವರು, ಮಹಿಳೆಯರಿಗೆ ನೀಡಬೇಕಾದ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಮಾತನಾಡುತ್ತಾ, ಇಂಡಿ ಮೈತ್ರಿಕೂಟದ ನಾಯಕರು ಈ ವಿಷಯದಲ್ಲಿ ತಮ್ಮ ದ್ವಂದ್ವ ನಿಲುವನ್ನು ಬಿಟ್ಟು ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಿದರು

 


Share this with Friends

Related Post