Sun. Nov 8th, 2026

ಬೆಂಗಳೂರು ಅಭಿವೃದ್ಧಿಗೆ ಬಿಗ್ ಬೂಸ್ಟ್: ನಾಳೆ ಬಿಡಿಎ ಮಹತ್ವದ ಯೋಜನೆಗಳ ಪರಿಶೀಲನೆ ನಡೆಸಲಿರುವ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಣ, ವ್ಯವಸ್ಥಿತ ನಗರೀಕರಣ ಹಾಗೂ ಸಾರ್ವಜನಿಕರ ದಶಕಗಳ ವಸತಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಸಿಲಿಕಾನ್ ಸಿಟಿಯ ಮೂಲಸೌಕರ್ಯದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಪ್ರಾಜೆಕ್ಟ್‌ಗಳ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಲಿದ್ದು, ಸಭೆಯ ಬಳಿಕ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹಲವು ಮಹತ್ವದ ನಿರ್ಧಾರ ಹಾಗೂ ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಮನೆಗಳ ಸಕ್ರಮ ಶುಲ್ಕದಲ್ಲಿ ಶೇ. 50ರಷ್ಟು ಭಾರಿ ಕಡಿತ!

ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗಗಳಲ್ಲಿ 12 ವರ್ಷಗಳ ಹಿಂದೆ (10.07.2008 ರ ಒಳಗೆ) ನಿರ್ಮಿಸಲಾಗಿರುವ ಮನೆಗಳನ್ನು ನಿಯಮ 38(ಡಿ) ಅಡಿಯಲ್ಲಿ ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿನಿಯಮ ಹೊರಡಿಸಿದೆ. ಆದರೆ, ಸಾರ್ವಜನಿಕರಿಗೆ ಮತ್ತಷ್ಟು ಆರ್ಥಿಕ ನೆಮ್ಮದಿ ನೀಡುವ ಸಲುವಾಗಿ ಮಾರ್ಗಸೂಚಿ ಮೌಲ್ಯದ ದರವನ್ನು (Guideline Value) ಶೇ. 50 ರಷ್ಟು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.

ಪರಿಷ್ಕೃತ ದರಗಳ ವಿವರ ಇಲ್ಲಿದೆ:

20×30 ಅಡಿ ಒಳಗಿನ ಸಣ್ಣ ನಿವೇಶನ: ಈ ಹಿಂದಿನ ಶೇ. 10 ರ ಬದಲಾಗಿ ಕೇವಲ ಶೇ. 5 ರಷ್ಟು ಶುಲ್ಕ.

20×30 ರಿಂದ 30×40 ಅಡಿ ನಿವೇಶನ: ಶೇ. 25 ರ ಬದಲಿಗೆ ಕೇವಲ ಶೇ. 12.5 ರಷ್ಟು ಶುಲ್ಕ.

30×40 ರಿಂದ 40×60 ಅಡಿ ನಿವೇಶನ: ಶೇ. 40 ರ ಬದಲಿಗೆ ಕೇವಲ ಶೇ. 20 ರಷ್ಟು ಶುಲ್ಕ.

40×60 ರಿಂದ 50×80 ಅಡಿ ನಿವೇಶನ: ಶೇ. 50 ರ ಬದಲಿಗೆ ಕೇವಲ ಶೇ. 25 ರಷ್ಟು ಶುಲ್ಕ ಮತ್ತು ನಿಗದಿತ ದಂಡ.

ಅರ್ಜಿ ಸಲ್ಲಿಕೆ ಸಂಪೂರ್ಣ ಆನ್‌ಲೈನ್

ಈ ಮನೆಗಳ ಸಕ್ರಮ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇಡೀ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲಾಗುತ್ತಿದ್ದು, ಈ ನೂತನ ಆನ್‌ಲೈನ್ ವ್ಯವಸ್ಥೆಗೆ ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಕಾಮಗಾರಿಗಳ ವಿಳಂಬ ಧೋರಣೆಗೆ ಬ್ರೇಕ್ ಹಾಕಿ, ನಿಗದಿತ ಕಾಲಮಿತಿಯೊಳಗೆ ಭೂಸ್ವಾಧೀನ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಲಿದ್ದಾರೆ

 


Share this with Friends

Related Post