Sun. Nov 8th, 2026

ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ, ಸಹಕಾರವಷ್ಟೇ ಸಾಕು: ಸಿಎಂ ಡಿ.ಕೆ. ಶಿವಕುಮಾರ್

Share this with Friends

ಹಾಸನ: “ಮೇಕೆದಾಟು ಯೋಜನೆಗೆ ನೆರೆಯ ತಮಿಳುನಾಡು ಸರ್ಕಾರದ ಒಪ್ಪಿಗೆಯ ಅಗತ್ಯವಿಲ್ಲ, ಬದಲಿಗೆ ಅವರ ಸಹಕಾರವಷ್ಟೇ ಸಾಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಹಾಸನದ ನಗರಸಭೆ ಪಾರ್ಕಿಂಗ್ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ಅಲ್ಲಿನ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕದ ಹಕ್ಕನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಮೇಕೆದಾಟು ಜಲವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, “ನಾವು ತಮಿಳುನಾಡಿಗೆ ನೀಡಬೇಕಾದ 177 ಟಿಎಂಸಿ ನೀರಿನ ಹಕ್ಕನ್ನು ನಿರಾಕರಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ನಮ್ಮ ಹಕ್ಕನ್ನು ಎತ್ತಿಹಿಡಿದಿದ್ದು, ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಿದೆ. ಈ ಯೋಜನೆಯಡಿ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಹಾಗೂ ಅರಣ್ಯ ನಷ್ಟಕ್ಕೆ ಪರ್ಯಾಯ ಭೂಮಿ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ವಿವರಿಸಿದರು.

ಹಾಸನಾಂಬೆ ಸನ್ನಿಧಿಗೆ 20 ಕೋಟಿ ವಿಶೇಷ ಪ್ಯಾಕೇಜ್

ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಹಾಸನದ ಸುಪ್ರಸಿದ್ಧ ಹಾಸನಾಂಬೆ ದೇವಾಲಯದ ಮೂಲಸೌಕರ್ಯ ವೃದ್ಧಿ ಹಾಗೂ ರಾಜಗೋಪುರ ನಿರ್ಮಾಣದ ಸಮಗ್ರ ಅಭಿವೃದ್ಧಿಗೆ ₹20 ಕೋಟಿ ರೂಪಾಯಿ ಅನುದಾನ ನೀಡಲು ಸರ್ಕಾರ ಚಿಂತನೆ ನಡೆಸಿದೆ. ದೇವಾಲಯದ ವಿಶೇಷ ದರ್ಶನ ಹಾಗೂ ಲಡ್ಡು ಮಾರಾಟದಿಂದ ಬಂದಿರುವ ಸುಮಾರು ₹25 ಕೋಟಿ ಆದಾಯವನ್ನು ಸಂಪೂರ್ಣವಾಗಿ ಈ ಭಾಗದ ಅಭಿವೃದ್ಧಿಗೇ ಬಳಸಲಾಗುವುದು. ಜಾಗದ ಕೊರತೆ ನೀಗಿಸಲು ಸ್ಥಳೀಯ ಕಟ್ಟಡ ಮಾಲೀಕರೊಂದಿಗೆ ಚರ್ಚಿಸಿ, 2013ರ ಭೂಸ್ವಾಧೀನ ಕಾಯ್ದೆಯಡಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಕೀಯದಲ್ಲಿ ದಿನವೂ ಕುಸ್ತಿ ಆಡುತ್ತಿದ್ದೇವೆ!

ವೇದಿಕೆಯಲ್ಲಿ ಕ್ರೀಡೋತ್ಸವದ ಕುರಿತು ಮಾತನಾಡುತ್ತಾ ಹಾಸ್ಯ ಚಟಾಕಿ ಹಾರಿಸಿದ ಮುಖ್ಯಮಂತ್ರಿಗಳು, “ಚಿಕ್ಕ ವಯಸ್ಸಿನಲ್ಲಿ ನಾನು ವಾಲಿಬಾಲ್ ಆಡುತ್ತಿದ್ದೆ, ಆದರೆ ಕ್ರೀಡಾಂಗಣದಲ್ಲಿ ಕುಸ್ತಿ ಆಡಿರಲಿಲ್ಲ. ಆದರೆ ಈಗ ರಾಜಕೀಯದಲ್ಲಿ ಪ್ರತಿದಿನ ಕುಸ್ತಿ ಆಡುವಂತಾಗಿದೆ” ಎಂದರು. ಇದೇ ವೇಳೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳು ನಿರಂತರ

“ಕೆಲವರು ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ, ಅವರಿಗೆ ಹಾಸನಾಂಬೆಯೇ ತಕ್ಕ ಉತ್ತರ ನೀಡಲಿದ್ದಾಳೆ. ನಮ್ಮ ಸರ್ಕಾರ ಬಡವರ ಪರವಾಗಿದ್ದು, ಯಾವುದೇ ಕಾರಣಕ್ಕೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಗೃಹಲಕ್ಷ್ಮಿ ಯೋಜನೆಯ ₹7,000 ಕೋಟಿ ರೂಪಾಯಿ ಮೊತ್ತವನ್ನು ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

 

 


Share this with Friends

Related Post