ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಜಿಕೆವಿಕೆ (GKVK) ಆವರಣದಲ್ಲಿ ನವೆಂಬರ್ 16, 17 ಮತ್ತು 18ರಂದು ಮೂರು ದಿನಗಳ ಕಾಲ ಬೃಹತ್ ‘ಕೃಷಿಮೇಳ-2026’ ಅನ್ನು ಆಯೋಜಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಈ ಬಾರಿಯ ಮೇಳದಲ್ಲಿ ‘ಬರ ನಿರ್ವಹಣೆ ತಂತ್ರಜ್ಞಾನಗಳು ಹಾಗೂ ಕೃಷಿ ನಾವೀನ್ಯತೆಗಳ’ ಪ್ರದರ್ಶನಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ಕೃಷಿ ಮಾಹಿತಿ ಘಟಕ ತಿಳಿಸಿದೆ.
ನವೆಂಬರ್ 16ರಂದು ನಡೆಯಲಿರುವ ಕೃಷಿಮೇಳದ ಉದ್ಘಾಟನಾ ಸಮಾರಂಭವನ್ನು ರಾಜ್ಯ ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಎನ್. ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ. ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ. ಸುರೇಶ ಸೇರಿದಂತೆ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಗಣ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರಲಿದ್ದಾರೆ.
ಬರ ನಿರೋಧಕ ತಂತ್ರಜ್ಞಾನ ಮತ್ತು ತಳಿಗಳು: ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಬರ ನಿರ್ವಹಣೆ ತಂತ್ರಜ್ಞಾನಗಳು, ಬರ ಪರಿಸ್ಥಿತಿಗೆ ಸೂಕ್ತವಾದ ಸುಧಾರಿತ ಬೆಳೆಗಳು ಮತ್ತು ವಿವಿಧ ತಳಿಗಳ ಪ್ರತ್ಯಕ್ಷಿಕೆಗಳ ಪ್ರದರ್ಶನವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿ ಸಂಶೋಧನಾ ವಿಭಾಗಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಹಾಗೂ ವಿವಿಧ ಅಭಿವೃದ್ಧಿ ಇಲಾಖೆಗಳು ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆ ಮಾಡಿವೆ.
ಎಲ್ ನಿನೋ ಮತ್ತು ಹವಾಮಾನ ವೈಪರೀತ್ಯ ಚರ್ಚೆ: ಮೇಳದ ಮೂರು ದಿನಗಳ ಅವಧಿಯಲ್ಲಿ ನುರಿತ ತಜ್ಞರಿಂದ ರಾಜ್ಯದಲ್ಲಿ ಕಂಡುಬಂದಿರುವ ಎಲ್ ನಿನೋ ಪರಿಣಾಮ ಹಾಗೂ ಭವಿಷ್ಯದ ಸಿದ್ಧತೆಗಳು, ಹವಾಮಾನ ವೈಪರೀತ್ಯ ಚತುರ ಕೃಷಿ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತು ಮಹತ್ವದ ವಿಚಾರ ಸಂಕಿರಣಗಳು ನಡೆಯಲಿವೆ.
ಸ್ಥಳದಲ್ಲೇ ರೈತರ ಸಮಸ್ಯೆಗಳಿಗೆ ಪರಿಹಾರ: ರೈತರ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಸೂಕ್ತ ತಾಂತ್ರಿಕ ಪರಿಹಾರ ಹಾಗೂ ಮಾರ್ಗದರ್ಶನ ನೀಡಲು ವಿಶೇಷ ‘ಸಲಹಾ ಕೇಂದ್ರ’ವನ್ನು ತೆರೆಯಲಾಗುವುದು.
ಪ್ರಗತಿಪರ ರೈತರಿಗೆ ಪುರಸ್ಕಾರ: ಕೃಷಿಮೇಳದ ಪ್ರಮುಖ ಅಂಗವಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಸಾಧನೆ ಮಾಡಿದ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ರಾಜ್ಯದ ಕೃಷಿ ವಲಯಕ್ಕೆ ಹೊಸ ದಿಕ್ಸೂಚಿ ನೀಡಲಿರುವ ಈ ಕೃಷಿಮೇಳದಲ್ಲಿ ರೈತರು, ರೈತ ಮಹಿಳೆಯರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೃಷಿ ವಿಶ್ವವಿದ್ಯಾನಿಲಯ ವಿನಂತಿಸಿದೆ

