ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತನ್ನ ಬಡಾವಣೆಗಳ ಸ್ಥಾಪನೆಯ 50ನೇ ವರ್ಷದ (ಚಿನ್ನದ ಹಬ್ಬ) ಸಂಭ್ರಮದಲ್ಲಿದ್ದು, ಈ ಸುಸಂದರ್ಭದಲ್ಲಿ ಮಹಾನಗರದ ಲಕ್ಷಾಂತರ ಬಿಡಿಎ ನಿವಾಸಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆಗಳನ್ನು ನೀಡಿದೆ.
ಬಿಡಿಎ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಾಧಿಕಾರದ ಮೂರು ಅತ್ಯಂತ ಮಹತ್ವದ ಜನಪರ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ನಾಗರಿಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಮೂರೂ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
1. ಬಿಡಿಎ ಜಾಗದ ಮನೆಗಳಿಗೆ ಸಕ್ರಮ ಭಾಗ್ಯ: ಸೆಕ್ಷನ್ 38(ಡಿ) ಶುಲ್ಕ ಭಾರಿ ಕಡಿತ!
ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ 10.07.2008ಕ್ಕಿಂತ ಮುಂಚೆ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿರುವ ನಾಗರಿಕರಿಗೆ ಬಿಡಿಎ ಕಾಯ್ದೆಯ ಸೆಕ್ಷನ್ 38(ಡಿ) ಅಡಿಯಲ್ಲಿ ಸಕ್ರಮಗೊಳಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ. ಹಿಂದೆ ಇದ್ದ ಶುಲ್ಕಗಳು ಭಾರಿ ಹೊರೆಯಾಗಿದ್ದರಿಂದ ಬಡ ಮತ್ತು ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಪ್ರಸ್ತುತ ಮಾರ್ಗಸೂಚಿ ಮೌಲ್ಯದ (Guideline Value) ಸಕ್ರಮ ಶುಲ್ಕವನ್ನು ನೇರವಾಗಿ ಅರ್ಧಕ್ಕರ್ಧ (ಶೇ. 50 ರಷ್ಟು) ಕಡಿತಗೊಳಿಸಲಾಗಿದೆ.
20×30 ನಿವೇಶನಗಳು: ಈ ಹಿಂದೆ ಇದ್ದ ಮಾರ್ಗಸೂಚಿ ಮೌಲ್ಯದ ಶೇ. 10 ರಷ್ಟು ಶುಲ್ಕವನ್ನು ಈಗ ಶೇ. 5 ಕ್ಕೆ ಕಡಿತಗೊಳಿಸಲಾಗಿದೆ.
20×30 ಕ್ಕಿಂತ ಹೆಚ್ಚು ಹಾಗೂ 30×40 ರವರೆಗೆ: ಮಾರ್ಗಸೂಚಿ ಮೌಲ್ಯದ ಶೇ. 25 ರಷ್ಟು ಇದ್ದ ಶುಲ್ಕವನ್ನು ಈಗ ಶೇ. 12.5 ಕ್ಕೆ ಇಳಿಸಲಾಗಿದೆ.
30×40 ಕ್ಕಿಂತ ಹೆಚ್ಚು ಹಾಗೂ 40×60 ರವರೆಗೆ: ಈ ಹಿಂದೆ ಇದ್ದ ಶೇ. 40 ರಷ್ಟು ಶುಲ್ಕವನ್ನು ಈಗ ಶೇ. 20 ಕ್ಕೆ ಇಳಿಕೆ ಮಾಡಲಾಗಿದೆ.
40×60 ಕ್ಕಿಂತ ಹೆಚ್ಚು ಹಾಗೂ 50×80 ರವರೆಗೆ: ಮಾರ್ಗಸೂಚಿ ಮೌಲ್ಯದ ಶೇ. 25 ರಷ್ಟು ಶುಲ್ಕ ಹಾಗೂ ನಿಯಮಾನುಸಾರ ದಂಡ ವಿಧಿಸಲಾಗುತ್ತದೆ.
(ಗಮನಿಸಿ: ಮೂಲೆ ನಿವೇಶನಗಳಲ್ಲಿನ (Corner Sites) ಕಟ್ಟಡಗಳಿಗೆ ಮೇಲ್ಕಂಡ ಮಾರ್ಗಸೂಚಿ ದರದ ಎರಡರಷ್ಟು ಮೌಲ್ಯ ಪಾವತಿಸಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು 2026ರ ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ).
2. 20 ಸಾವಿರ ನಿವಾಸಿಗಳ ಹಿತ ಕಾಯಲಿರುವ ‘ಶುದ್ಧ ಕ್ರಯಪತ್ರ ಮೇಳ’
ಬಿಡಿಎ ನಿವೇಶನ ಹಂಚಿಕೆಯಾಗಿ 10 ವರ್ಷಗಳ ಲೀಸ್ ಅವಧಿ ಮುಗಿದಿದ್ದರೂ ಸಾರ್ವಜನಿಕರು ಹಾಗೂ ಹಂಚಿಕೆದಾರರು ವಿವಿಧ ತಾಂತ್ರಿಕ ಕಾರಣಗಳಿಂದ ಇದುವರೆಗೆ ಶುದ್ಧ ಕ್ರಯಪತ್ರ (Absolute Sale Deed) ಪಡೆದಿರಲಿಲ್ಲ. ಇಂತಹ ಸುಮಾರು 20 ಸಾವಿರಕ್ಕೂ ಅಧಿಕ ಹಂಚಿಕೆದಾರರ ಗೊಂದಲ ನಿವಾರಿಸಲು ಬಿಡಿಎ ವಿಶೇಷ ‘ಶುದ್ಧ ಕ್ರಯಪತ್ರ ಮೇಳ’ವನ್ನು ಆಯೋಜಿಸುತ್ತಿದೆ. ಆಸ್ತಿ ಮಾಲೀಕರು ಎಲ್ಲಾ ಅಗತ್ಯ ನಿವೇಶನ ದಾಖಲೆಗಳೊಂದಿಗೆ 2026ರ ಡಿಸೆಂಬರ್ 17ರ ಒಳಗಾಗಿ ಅರ್ಜಿ ಸಲ್ಲಿಸಿದರೆ, ಅರ್ಜಿ ಸ್ವೀಕೃತವಾದ 60 ದಿನಗಳ ಒಳಗಾಗಿ ನಿಯಮಾನುಸಾರ ಕ್ರಯಪತ್ರ ನೋಂದಣಿ ಮಾಡಿಕೊಡಲು ಬಿಡಿಎ ಕಟ್ಟುನಿಟ್ಟಿನ ಕ್ರಮವಹಿಸಲಿದೆ.
3. ಅಂಚಿನ ಜಾಗಗಳ (Marginal Land) ಹಂಚಿಕೆಗೂ ಸುವರ್ಣಾವಕಾಶ
ಬಿಡಿಎ ವತಿಯಿಂದ ಈಗಾಗಲೇ ನಿವೇಶನ ಹಂಚಿಕೆಯಾಗಿರುವ ಮಾಲೀಕರ ಸೈಟುಗಳ ಹಿಂಭಾಗದಲ್ಲಿ ಅಥವಾ ಅಕ್ಕಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿದ ಅಂಚಿನ ಜಾಗಗಳು (Marginal Land) ಲಭ್ಯವಿದ್ದಲ್ಲಿ, ಅವುಗಳನ್ನು ಅಧಿಕೃತವಾಗಿ ಪಡೆದುಕೊಳ್ಳಲು ಹಂಚಿಕೆದಾರರಿಗೆ ಅವಕಾಶ ನೀಡಲಾಗಿದೆ. ಈ ಅಂಚಿನ ಜಾಗವನ್ನು ಪಡೆದುಕೊಳ್ಳಲು ಇಚ್ಛಿಸುವ ಮೂಲ ನಿವೇಶನದ ಆಸ್ತಿ ಮಾಲೀಕರು 2026ರ ಡಿಸೆಂಬರ್ 17ರ ಒಳಗಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸ್ವೀಕರಿಸಿದ 60 ದಿನಗಳ ಒಳಗಾಗಿ ನಿಯಮಾನುಸಾರ ಪರಿಶೀಲಿಸಿ, ಚಾಲ್ತಿಯಲ್ಲಿರುವ ಮಾರ್ಗಸೂಚಿ ದರಗಳನ್ನು ವಿಧಿಸಿ ಆ ಜಾಗವನ್ನು ಮೂಲ ಹಂಚಿಕೆದಾರರಿಗೆ ನಿಯಮಬದ್ಧವಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ಜಾಗಗಳಿಗೆ ಈ ಸೌಲಭ್ಯಗಳು ಸಿಗುವುದಿಲ್ಲ?
ಉದ್ಯಾನವನಗಳು (Parks), ಆಟದ ಮೈದಾನಗಳು, ಸಾರ್ವಜನಿಕ ಮುಕ್ತ ಸ್ಥಳಗಳು, ರಿಂಗ್ ರಸ್ತೆ ಅಥವಾ ಪ್ರಸ್ತಾಪಿತ ರಸ್ತೆ ಯೋಜನೆಗಳಿಗೆ ಮೀಸಲಾದ ಜಾಗಗಳು, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗಿನ ಜಾಗಗಳು ಹಾಗೂ ನ್ಯಾಯಾಲಯದ ಮಧ್ಯಂತರ ಆದೇಶವಿರುವ ವಿವಾದಿತ ಭೂಮಿಗಳಲ್ಲಿನ ಕಟ್ಟಡಗಳಿಗೆ ಮೇಲ್ಕಂಡ ಯಾವುದೇ ಸೌಲಭ್ಯಗಳು ಅನ್ವಯಿಸುವುದಿಲ್ಲ ಎಂದು ಸರ್ಕಾರ ಕಡ್ಡಾಯ ನಿಯಮವನ್ನು ವಿಧಿಸಿದೆ.

