ಬೆಂಗಳೂರು: ದೇಶ-ವಿದೇಶಗಳ ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ಆಸಕ್ತರ ಪ್ರಮುಖ ಆಕರ್ಷಣೆಯಾಗಿರುವ ವಿಶ್ವಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (BBP) ಪ್ರವಾಸಿ ಸ್ನೇಹಿ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ವನ್ಯಜೀವಿಗಳ ಕಲ್ಯಾಣಕ್ಕಾಗಿ ರೂ.38 ಕೋಟಿ ವೆಚ್ಚದ ವಿವಿಧ ನೂತನ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಯಾನವನಕ್ಕೆ ಭೇಟಿ ನೀಡಿ ಈ ಎಲ್ಲಾ ನೂತನ ಯೋಜನೆಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ ಒಂದಕ್ಕೆ ಚಿಕಿತ್ಸೆ ನೀಡುತ್ತಿದ್ದ ಸನ್ನಿವೇಶದಲ್ಲಿ ದುರದೃಷ್ಟವಶಾತ್ ಸಾವಿಗೀಡಾಗಿದ್ದ ಯುವ ಪಶುವೈದ್ಯಾಧಿಕಾರಿ ಡಾ. ಸಮೀಕ್ಷಾ ಅವರ ಸ್ಮರಣಾರ್ಥವಾಗಿ, ಉದ್ಯಾನವನದ ಹಿಪ್ಪೋಪೊಟಮಸ್ ಬ್ಲಾಕ್ಗೆ ಹಾಗೂ ಇತ್ತೀಚೆಗಷ್ಟೇ ಜನಿಸಿದ ಮರಿ ಹಿಪ್ಪೋಪೊಟಮಸ್ಗೆ “ಸಮೀಕ್ಷಾ” ಎಂದು ನಾಮಕರಣ ಮಾಡಲು ಸಚಿವರು ಸ್ಥಳದಲ್ಲೇ ಭಾವನಾತ್ಮಕ ಸೂಚನೆ ನೀಡಿದರು.
ಲೋಕಾರ್ಪಣೆಗೊಂಡ ಪ್ರಮುಖ ನೂತನ ಸೌಲಭ್ಯಗಳು:
ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳು: ಪ್ರವಾಸಿಗರು ಪರಿಸರ ಮಾಲಿನ್ಯವಿಲ್ಲದೆ ಉದ್ಯಾನವನ ವೀಕ್ಷಿಸಲು ಅನುಕೂಲವಾಗುವಂತೆ ನೂತನ ಎಲೆಕ್ಟ್ರಿಕ್ ವಾಹನಗಳ ಸೇವೆಗೆ ಹಸಿರು ನಿಶಾನೆ ತೋರಿಸಲಾಯಿತು.
ಸುಸಜ್ಜಿತ ಆಡಳಿತ ಕಚೇರಿ ‘ಅಡವಿ’: ಪ್ರಾಧಿಕಾರದ ಆಡಳಿತ ಚಟುವಟಿಕೆಗಳನ್ನು ಸುಲಭಗೊಳಿಸಲು ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಕಚೇರಿ “ಅಡವಿ” ಕಟ್ಟಡ ಹಾಗೂ ಕಣ್ಗಾವಲು ನಡೆಸುವ ಅರಣ್ಯ ಸಿಬ್ಬಂದಿಗಳ ನೂತನ ವಸತಿಗೃಹಗಳನ್ನು ಉದ್ಘಾಟಿಸಲಾಯಿತು.
ಪ್ರಾಣಿ-ಪಕ್ಷಿಗಳ ನೂತನ ಆವರಣ: ತೋಳಗಳು, ಚೀತಾ, ಎಮು ಮತ್ತು ರಿಯಾ ಪಕ್ಷಿಗಳು ಹಾಗೂ ಫೆಸೆಂಟ್ ಪಕ್ಷಿಗಳಿಗಾಗಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಆವರಣಗಳನ್ನು ವನ್ಯಜೀವಿಗಳ ವಾಸಕ್ಕೆ ಮುಕ್ತಗೊಳಿಸಲಾಯಿತು.
ಪ್ರವಾಸಿಗರ ಆಕರ್ಷಣೆ ಮತ್ತು ಕೆಫೆ: ಉದ್ಯಾನವನದ ಅತ್ಯಾಧುನಿಕ ನವೀಕೃತ ಮುಖ್ಯ ಪ್ರವೇಶ ದ್ವಾರ, ವಿಶೇಷ ನೆನಪಿನ ವಸ್ತುಗಳ ‘ಝೂ ಶಾಪ್’ ಹಾಗೂ ಪ್ರವಾಸಿಗರ ಹಸಿವು ನೀಗಿಸಲು ‘ಸುವರ್ಣಮುಖಿ ಕೆಫೆ’ಗೆ ಚಾಲನೆ ನೀಡಲಾಯಿತು.
ಆರೋಗ್ಯ ಕೇಂದ್ರ ಮತ್ತು ಸುವರ್ಣ ಆನೆ ಕೇಂದ್ರ: ಪ್ರಾಣಿಗಳ ನೂತನ ಕ್ವಾರಂಟೈನ್ ಬ್ಲಾಕ್, ಕೇಂದ್ರೀಯ ನರ್ಸರಿ ಹಾಗೂ ಲೈವ್ ಫೀಡ್ ಘಟಕವನ್ನು ಉದ್ಘಾಟಿಸಲಾಯಿತು. ಇದರೊಂದಿಗೆ ಸಫಾರಿ ಪ್ರದೇಶದಲ್ಲಿ ಆನೆಗಳ ಆರೋಗ್ಯ, ಆರೈಕೆ ಹಾಗೂ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವೀಕ್ಷಣಾ ಗೋಪುರವನ್ನು (Watch Tower) ಸಚಿವರು ಉದ್ಘಾಟಿಸಿ, ಸಫಾರಿ ವೀಕ್ಷಣೆಯ ಮೂಲಕ ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳನ್ನು ಪರಿಶೀಲಿಸಿದರು.
ಈ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ರವಿ ಬಿ. ಪಿ. (IFS) ಸೇರಿದಂತೆ ಇಲಾಖೆಯ ಪ್ರಮುಖ ಹಿರಿಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು

