Wed. Nov 11th, 2026

ಹಾಕಿ ದಿಗ್ಗಜ ಎಂ.ಎಂ. ಸೊಮಯ್ಯ ನಿವಾಸದಲ್ಲಿ ಕಳ್ಳತನ ಪ್ರಕರಣ: ಇಬ್ಬರು ಖದೀಮರ ಬಂಧನ, 8 ಅಂತಾರಾಷ್ಟ್ರೀಯ ಪದಕಗಳು ವಶ

Share this with Friends

ಬೆಂಗಳೂರು: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಎಂ.ಎಂ. ಸೊಮಯ್ಯ ಅವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವಾಗಿದ್ದ ಎಲ್ಲಾ 8 ಅಂತಾರಾಷ್ಟ್ರೀಯ ಕ್ರೀಡಾ ಪದಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಣಿಕ್ಯ ಅಲಿಯಾಸ್ ಮಣಿಕಂಠ (31) ಹಾಗೂ ಭರತ್ (25) ಬಂಧಿತ ಆರೋಪಿಗಳು. ಇವರಿಂದ 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ, 1982ರ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ ಕಂಚಿನ ಪದಕ, 1982ರ ಚಾಂಪಿಯನ್ಸ್ ಟ್ರೋಫಿ ಕಂಚಿನ ಪದಕ ಸೇರಿದಂತೆ ಒಟ್ಟು 8 ಅಂತಾರಾಷ್ಟ್ರೀಯ ಪದಕಗಳು, ಕೊಡವ ಸಾಂಪ್ರದಾಯಿಕ ಕತ್ತಿ (ಪೀಚೆಕತ್ತಿ), ಕ್ಯಾಮೆರಾ, ಒಲಿಂಪಿಕ್ಸ್ ಕಿಟ್ ಬ್ಯಾಗ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದ ಹಿನ್ನೆಲೆ ಮತ್ತು ಕಾರ್ಯಾಚರಣೆ:

ನ್ಯೂ ತಿಪ್ಪಸಂದ್ರದ ನಿವಾಸಿಯಾದ ಎಂ.ಎಂ. ಸೊಮಯ್ಯ ಅವರು ಕುಟುಂಬ ಸಮೇತ ಅಕ್ಟೋಬರ್ 25ರಂದು ತಮ್ಮ ತವರು ಜಿಲ್ಲೆ ಕೊಡಗಿಗೆ ತೆರಳಿದ್ದರು. ಅಕ್ಟೋಬರ್ 28ರ ನಸುಕಿನ ವೇಳೆ ಮನೆಗೆ ನುಗ್ಗಿದ್ದ ಕಳ್ಳರು ಪದಕಗಳು, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ರಚಿಸಲಾಗಿದ್ದ 8 ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, ನವೆಂಬರ್ 9ರಂದು ರಾಮನಗರದ ಹಗಳಹಳ್ಳಿ ಕ್ರಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿವೆ. ಆರೋಪಿಗಳು ಈ ಪದಕಗಳ ಮಹತ್ವ ತಿಳಿಯದೆ ಕಳ್ಳತನ ಮಾಡಿದ್ದು, ರಾಜಾಜಿನಗರದ ಚಿನ್ನ ಖರೀದಿ ಕಂಪನಿಯೊಂದಕ್ಕೆ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಮಾರಾಟ ಮಾಡಿದ್ದರು. ಉಳಿದ ಆರು ಪದಕಗಳನ್ನು ಹೊಸಕೋಟೆಯ ಮನೆಯಲ್ಲಿ ಬಚ್ಚಿಟ್ಟಿದ್ದರು. ಸದ್ಯ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಮೂರನೇ ಆರೋಪಿಗಾಗಿ ಶೋಧ ಮುಂದುವರಿದಿದೆ. ಬಂಧಿತ ಮಣಿಕಂಠನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಒಟ್ಟು 33 ಕ್ರಿಮಿನಲ್ ಪ್ರಕರಣಗಳಿವೆ ಎಂದು ಆಯುಕ್ತರು ವಿವರಿಸಿದರು.

ನನಗೆ ಮತ್ತೊಮ್ಮೆ ಪದಕ ಗೆದ್ದಷ್ಟೇ ಖುಷಿಯಾಗಿದೆ: ಸೊಮಯ್ಯ

ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪದಕಗಳನ್ನು ಎಂ.ಎಂ. ಸೊಮಯ್ಯ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಸೊಮಯ್ಯ, “ನನ್ನ ಜೀವನದ ಅತ್ಯಮೂಲ್ಯ ಆಸ್ತಿಯಾಗಿದ್ದ ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಎಲ್ಲಾ ಪದಕಗಳು ಮರಳಿ ಸಿಕ್ಕಿರುವುದು ನನಗೆ ಮತ್ತೊಮ್ಮೆ ಒಲಿಂಪಿಕ್ಸ್ ಗೆದ್ದಷ್ಟೇ ಸಂತಸ ತಂದಿದೆ. ಬೆಂಗಳೂರು ಪೊಲೀಸರ ತ್ವರಿತ ಮತ್ತು ದಕ್ಷ ಕಾರ್ಯಾಚರಣೆಗೆ ನಾನು ಆಭಾರಿಯಾಗಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದರು.

 


Share this with Friends

Related Post