Sat. Nov 14th, 2026

ರಾಜಕೀಯ ಒತ್ತಡದಿಂದ ಮಂಡ್ಯ ಮಹಿಳಾ ಕಾಲೇಜಿನಲ್ಲಿ ಎಚ್‌ಡಿಕೆ ಕಾರ್ಯಕ್ರಮ ರದ್ದು ಆರೋಪ; ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ವಿತರಿಸಿದ ‘ಟೀಂ ಎಚ್‌ಡಿಕೆ’

Share this with Friends

ಮಂಡ್ಯ: ಸ್ಥಳೀಯ ಶಾಸಕರ ರಾಜಕೀಯ ಒತ್ತಡಕ್ಕೆ ಮಣಿದು ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿಗದಿತ ಕಾರ್ಯಕ್ರಮವನ್ನು ಏಕಾಏಕಿ ರದ್ದುಗೊಳಿಸಿದೆ ಎಂದು ಜೆಡಿಎಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ (ನವೆಂಬರ್ 14) ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಕಾಲೇಜಿನ ಪ್ರಾಂಶುಪಾಲರೇ ಅಧಿಕೃತವಾಗಿ ಸಚಿವ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ವಿದ್ಯಾರ್ಥಿನಿಯರಿಗೆ ವಿಶೇಷ ಕೊಡುಗೆಯಾಗಿ ನೀಡಲು ಸಚಿವರು ತಮ್ಮ ಸ್ವಂತ ಹಣದಿಂದ ಗುಣಮಟ್ಟದ ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ ತರಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಶೈಕ್ಷಣಿಕ ಚಟುವಟಿಕೆಗಳ ನೆಪವೊಡ್ಡಿ ಪ್ರಾಂಶುಪಾಲರು ಕಾರ್ಯಕ್ರಮ ರದ್ದಾಗಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಜೆಡಿಎಸ್ ದೂರಿದೆ.

ವಿದ್ಯಾರ್ಥಿನಿಯರಿಗೆ ಸಚಿವರ ಉಡುಗೊರೆ ತಲುಪಿಸಿದ ತಂಡ:

ಕಾರ್ಯಕ್ರಮ ರದ್ದಾದ ವಿಷಯ ತಿಳಿದು ಬೇಸರ ವ್ಯಕ್ತಪಡಿಸಿದ ಸಚಿವ ಕುಮಾರಸ್ವಾಮಿ, “ಕಾರ್ಯಕ್ರಮ ರದ್ದಾದರೂ ಪರವಾಗಿಲ್ಲ, ತಂದಿರುವ ನೀರಿನ ಬಾಟಲಿಗಳನ್ನು ವಿದ್ಯಾರ್ಥಿನಿಯರಿಗೆ ತಲುಪಿಸಿ ಶುಭಾಶಯ ತಿಳಿಸಿ” ಎಂದು ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದರು. ಅದರಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ನೇತೃತ್ವದ ‘ಟೀಂ ಎಚ್‌ಡಿಕೆ’ ಯುವಕರ ತಂಡ ಕಾಲೇಜಿಗೆ ತೆರಳಿ ಎಲ್ಲಾ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲಿಗಳನ್ನು ವಿತರಿಸಿತು.

ಶಾಸಕ ರವಿ ಗಣಿಗ ವಿರುದ್ಧ ಜೆಡಿಎಸ್ ಆಕ್ರೋಶ:

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್, “ಮಂಡ್ಯ ಶಾಸಕ ರವಿ ಗಣಿಗ ಅವರು ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಕೇಂದ್ರ ಸಚಿವರ ಕಾರ್ಯಕ್ರಮ ರದ್ದಾಗುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಒಳ್ಳೆಯದಾಗುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಶಾಸಕರು ಸಹಕಾರ ನೀಡಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

 


Share this with Friends

Related Post