ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ 11ರವರೆಗೆ ನಡೆಯಲಿರುವ 2026ರ ಚಳಿಗಾಲದ ಅಧಿವೇಶನಕ್ಕೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಕಲ್ಪಿಸಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಸುವರ್ಣಸೌಧದ ವಿದ್ಯುತ್ ಬಿಲ್‌ಗಳು ಕಾಲಕಾಲಕ್ಕೆ ನಿಯಮಿತವಾಗಿ ಪಾವತಿಯಾಗುತ್ತಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ ಎಂದು ಹೆಸ್ಕಾಂ ಸ್ಪಷ್ಟಪಡಿಸಿದೆ.
ಅಧಿವೇಶನದ 10 ದಿನಗಳ ಅವಧಿಯಲ್ಲಿ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಮತ್ತು ಕೆಪಿಟಿಸಿಎಲ್ (KPTCL) ವತಿಯಿಂದ ಬೆಳಗಾವಿ ನಗರದ ಪ್ರಮುಖ ಪ್ರದೇಶಗಳ ವಿದ್ಯುತ್ ವಿತರಣಾ ಜಾಲವನ್ನು ಸುಸ್ಥಿತಿಯಲ್ಲಿಡಲು ವಿಶೇಷ ನಿರ್ವಹಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಪ್ರಮುಖ ಫೀಡರ್‌ಗಳ ಸಮಗ್ರ ಪರಿಶೀಲನೆ ಮತ್ತು ದುರಸ್ತಿ:
ಸುವರ್ಣಸೌಧಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ಹರಿಕಾಕಾ ಕಾಂಪೌಂಡ್ ಹಾಗೂ ಯಡಿಯೂರಪ್ಪ ರಸ್ತೆ ಫೀಡರ್‌ಗಳ ಸಮಗ್ರ ತಪಾಸಣೆ ಹಾಗೂ ಅಗತ್ಯ ದುರಸ್ತಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗಿದೆ.
ನವೆಂಬರ್ 14ರಂದು ಸುವರ್ಣಸೌಧದ ಫೀಡರ್‌ಗಳಿಗೆ ಸಂಬಂಧಿಸಿದಂತೆ ಮುಂಚಿತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ ನಿರ್ವಹಣಾ ಕಾರ್ಯ ನಡೆಸಲಾಗಿದೆ.
ಅಧಿವೇಶನದ ಸಂದರ್ಭದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣವೇ ಸ್ಪಂದಿಸಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸನ್ನದ್ಧರಾಗಿರುವಂತೆ ನಿರ್ದೇಶನ ನೀಡಲಾಗಿದೆ.
ಬಿಲ್ ಬಾಕಿ ಇಲ್ಲ, ಸಂಪರ್ಕ ಕಡಿತಗೊಳಿಸಿಲ್ಲ:
ಸುವರ್ಣಸೌಧದ ವಿದ್ಯುತ್ ಬಿಲ್ ವಿಚಾರವಾಗಿ ಸ್ಪಷ್ಟನೆ ನೀಡಿರುವ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಹೇಮಂತ್ ಅವರು, “ಸುವರ್ಣಸೌಧಕ್ಕೆ ಸಂಬಂಧಿಸಿದ ವಿದ್ಯುತ್ ಬಳಕೆಯ ಬಿಲ್‌ಗಳು ನಿಗದಿತ ಅವಧಿಯೊಳಗೆ ನಿಯಮಿತವಾಗಿ ಸಂದಾಯವಾಗುತ್ತಿವೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲದ ಕಾರಣ ಸುವರ್ಣಸೌಧದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಚಳಿಗಾಲದ ಅಧಿವೇಶನಕ್ಕೆ ಯಾವುದೇ ಅಡಚಣೆಯಾಗದಂತೆ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದ್ದಾರೆ.

