Sat. Nov 14th, 2026

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅರ್ಥಪೂರ್ಣ ಮಕ್ಕಳ ದಿನಾಚರಣೆ; ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಭರವಸೆ

Share this with Friends

ಬೆಂಗಳೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ (ಮಕ್ಕಳ ಕ್ಯಾನ್ಸರ್ ವಿಭಾಗ) ಕಪೂರ್ ಕಟ್ಟಡಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಪುಟಾಣಿಗಳಿಗೆ ಶುಭಾಶಯ ಕೋರುವ ಮೂಲಕ ಆತ್ಮವಿಶ್ವಾಸ ತುಂಬಿದರು.

ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿದ್ದ ಮೊದಲವಾರ್ಡಿಗೆ ಸಿಎಂ ಕಾಲಿಟ್ಟಾಗ ಕ್ಯಾನ್ಸರ್ ಪೀಡಿತ ಬಾಲಕ ಧನುಷ್ ರೋಜಾ ಹೂ ಕೊಟ್ಟು‌ ಸಿಎಂ ಅವರನ್ನು ಸ್ವಾಗತಿಸಿದನು.

‘ಯಾವೂರು’ ಎಂದು ಸಿಎಂ ಕೇಳಿದರು, ಆತ ‘ನಂದು ಮಾಗಡಿ ಸಾರ್’ ಎಂದಾಗ ಸುತ್ತಲಿದ್ದವರ ಮುಖದಲ್ಲಿ ನಗು ಅರಳಿತ್ತು.

‘ಮಾಗಡಿ’. ‘ಓಹೋ ಕೆಂಪೇಗೌಡರ ಊರು. ಧನುಷ್ ಅಂದರೆ ಏನು ಗೊತ್ತಾ? ಬಾಣ ಅಂತ. ನೀನು ಬಾಣದಂತಿರಬೇಕು. ಬಾಣ ಹೊಡೀತೀಯ? ‘ಧನುಷ್ ನಿನಗೆ ಏನು ಆಗಲ್ಲ‌’ ಎಂದು ಸಿಎಂ ಶುಭ ಹಾರೈಸಿದಾಗ ಸುತ್ತಲಿದ್ದವರ ಕಣ್ಣಲ್ಲಿ ಅರಿವಿಲ್ಲದೇ ಕಣ್ಣೀರು ಜಾರಿತ್ತು.

ಕಣ್ಣಲ್ಲಿ‌ ನಿರೀಕ್ಷೆ, ಮನದಲ್ಲಿ ಹಾರೈಕೆ. ಕಿದ್ವಾಯಿ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಕಪೂರ್ ವಿಭಾಗಕ್ಕೆ‌ ಮಕ್ಕಳ‌ ದಿನಾಚರಣೆ ನಿಮಿತ್ತ ಮಕ್ಕಳಿಗೆ ಶುಭಾಶಯ ಹೇಳಲು  ಸಿಎಂ ಡಿ ಕೆ‌ ಶಿವಕುಮಾರ್ ಅವರು ಶನಿವಾರ ಕಾಲಿಡುತ್ತಿದ್ದಂತೆ ಮಕ್ಕಳಲ್ಲಿ‌ ಖಾಯಿಲೆ ಗುಣವಾಗುವ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಅವರ ಹಾರೈಕೆ, ಮಾತುಗಳು ಆತ್ಮವಿಶ್ವಾಸದ ಬೆಳಕನ್ನು ಹರಿಸಿತು.

ಹಾಸಿಗೆಯಲ್ಲಿ ಮಲಗಿದ್ದ ಪುಟಣಿಯನ್ನ ‘ಏನಪ್ಪ‌ ಯಾವೂರು‌?’ ಅಂದರು. ಮಗು ಎದ್ದು ಕೂತು, ‘ಹೊಸೂರು ಅಂದ. ‘ಏನು‌‌ ನಿನ್ನ ಹೆಸರು?’ ಅಂದರು, ಪಾರ್ಥಸಾರಥಿ ಅಂದ‌.  ‘ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ ಅಂತ. ಅಂದರೆ ನೀನು ಅರ್ಜುನ. ನಿನಗೆ ಏನೂ ಆಗೋಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದು. ತಲೆ ಕಡಿಸಿಕೊಳ್ಳಬೇಡ’ ಎಂದು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹುಡುಗನಿಗೆ ಧೈರ್ಯ ತುಂಬಿದರು.

ನಾನ್ಯಾರು ಗೊತ್ತಾ? ಡಿ ಕೆ ಶಿವಕುಮಾರ್:

ಹುಮನಾವಾದ್ ನ ಬಾಲಕಿ ಪೂಜಾ ಬಳಿ ಬಂದವರೇ, ‘ನಾನ್ಯಾರು ಗೊತ್ತಾ?’ ಅಂದರು.

‘ನನಗೆ ಗೊತ್ತು ನೀವು ಡಿಕೆ ಶಿವಕುಮಾರ್. ಮುಖ್ಯಮಂತ್ರಿ’ ಅಂದಳು.

‘ಪೂಜಾ ಮುಂದೆ ನೀನು ಏನಾಗಬೇಕು ಅಂತಿದ್ದೀಯ?’ಅಂತ ಮಗುವಿನ ಕನಸನ್ನು ಕೆದಕಿದರು.

‘ಸಾರ್ ನಾನು ಟೀಚರ್ ಆಗಬೇಕು ಅಂದುಕೊಂಡಿದ್ದೇನೆ’ ಅಂದಳು.

‘ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು’ ಎಂದು ಹರಸಿದರು.

ವಾರ್ಡನ‌ ಮೂಲೆಯಲಿದ್ದ ಸರೋಜಮ್ಮನ ಹತ್ತಿರ ಬಂದು, ‘ಏನು ಮಗು ಹೆಸರು’ ಅಂದರು. ಅಷ್ಟರಲ್ಲಿ ಹಾಸಿಗೆಯ ಮೇಲೆ ಕುಳಿತವಳೇ ‘ಗಂಗೋತ್ರಿ ಅಂದಳು.

‘ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರನ್ನು ಇಡಬೇಕು ಅಂದುಕೊಂಡಿದ್ದೀನಿ’ ಎಂದು ಚಾಕೊಲೇಟ್, ಡ್ರಾಯಿಂಗ್ ಪುಸ್ತಕಗಳನ್ನು ಹಂಚಿದರು.

ಎದುರಿಗಿದ್ದ‌ ಹಾಸಿಗೆ ಬಳಿಬಂದರು. ‘ಮಗೂಗೆ 2 ವರ್ಷ ಸಾರ್. ಹೆಸರು ಜಯಲಕ್ಷ್ಮೀ ಅಂತ’ ತಾಯಿ ಅನಿತಾ ಹೇಳಿದರು. ಆಕೆ ಕಣ್ಣಲ್ಲಿ ಹಿಂಜರಿಕೆ.

‘ಏನಾಗಿತ್ತು’ ಸಿಎಂ ಮತ್ತೆ ಪ್ರಶ್ನೆ ಕೇಳಿದರು. ‘ಬ್ಲಡ್…’ಅಂತ ಮಾತು ಹೊರಬಂತು,  ಕ್ಯಾನ್ಸರ್ ಅನ್ನೋ‌ಪದ  ಅನಿತಾ ಗಂಟಲಲ್ಲೇ ನಿಂತು ಹೋಯಿತು.

ಅನಿತಾ ಮಗಳು ಜಯಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟ ಅಷ್ಟಿಷ್ಟಲ್ಲ.‌ ಗುಲ್ಬರ್ಗಾದಿಂದ ಬೆಂಗೂಳೂರಿಗೆ ಬಂದು, ಸಂಬಂಧಿಕರಿಗೆ ಮಾತ್ರ ರೋಗದ ಹೆಸರು ಹೇಳಿ, ಕಿದ್ವಾಯಿ ಆಸ್ಪತ್ರೆಗೆ ತಿಂಗಳು ಗಟ್ಟಲೆ ಸೇರಿಸಿದ್ದರಿಂದ‌ ಈಗ ಮಗೂ ಕೈಗೆ ದಕ್ಕಿದೆ.

‘ಈಗ ಪರವಾಗಿಲ್ಲ ಸಾರ್, ಮಗು ಸುಧಾರಿಸ್ತಿದೆ’ ಸಿಎಂಗೆ ಅನಿತಾ ವರದಿ ಕೊಟ್ಟ ಮೇಲೆ‌ ಮುಂದೆ ಹೋದರು.

ಪಕ್ಕದ ಹಾಸಿಗೆಯಲ್ಲಿದ್ದ ಪುಟಾಣಿ ಹುಡುಗಿ , ‘ನನ್ನ ಹೆಸರು ಲೇಖನ. ನಂದು ರಾಯಚೂರು, ಡಿಸೆಂಬರ್ ಬಂದರೆ 10 ವರ್ಷ’ ಅಂತ‌ ಚಿನುಕುರಳಿ ರೀತಿ ಹೇಳಿದಳು. ಈಕೆ ಬೆಳಗ್ಗೆಯಿಂದಲೇ ಇವತ್ತು ಆಸ್ಪತ್ರೆಗೆ  ‘ದೊಡ್ಡ ಡಾಕ್ಟರ್ ಬರ್ತಾರೆ ಅಂತ ರೋಜಾ ಹೂ ಕೈಯಲ್ಲಿ ಹಿಡಿದು ನಿಂತಿದ್ದಳು. ಅಜ್ಜಿ ಆಂಜನಮ್ಮ‌ ಆರೈಕೆಯಲ್ಲಿ ಬದುಕುವ ಹೋರಾಟ ಮುಂದುವರಿಸಿದ್ದಳು.

ಹೀಗೆ ಸಿಎಂ ಕಿದ್ವಾಯಿ ಕೆಳಗಿನ ಎರಡೂ ವಾರ್ಡುಗಳ ಮಕ್ಕಳಿಗೆ ಕೈ ಕುಲಕಿ, ಧೈರ್ಯತುಂಬಿ ಮೊದಲನೆ ಕಟ್ಟಡದ  ಜನರಲ್ ವಾರ್ಡ್ ಹೋಗಿ,ಬಿಜಾಪುರ, ಶಾಪುರ, ಹುಮನಾಬಾದ್ ಹೀಗೆ ನಾಡಿನ ನಾನಾ‌ಭಾಗಗಳಿಂದ ಬಂದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಮಕ್ಕಳ‌ ಪಕ್ಕ ಕುಳಿತು

‘ಸರಿಯಾಗಿ ನೋಡ್ಕೊತಾ ಇದ್ದಾರ? ಊಟ ಕೊಡ್ತಾ ಇದ್ದಾರ’ ಅಂತ ವಿಚಾರಿಸಿದರು.

ರಕ್ತದ ಕ್ಯಾನ್ಸರ್ ನಿಂದ ನರಳುತ್ತಿದ್ದ ಶಾಪುರದ ಭವ್ಯಳ ತಲೆ‌ಸವರಿ, ‘ಸರಿಹೋಗುತ್ತದೆ. ಭಯ ಬೇಡ’ ಎಂದು ಸಮಾಧಾನ ಮಾಡಿದರು.

ಅವರ ತಾಯಿ ಸಂಗೀತಾಗೆ, ಗೃಹಜ್ಯೋತಿ, ಗೃಹಲಕ್ಷೀ ಸೌಲಭ್ಯಗಳು ಸಿಗುತ್ತಿದೆಯಾ? ಅಂತ ವಿಚಾರಿಸಿದರು.

ಕನಕಪುರದ ಋತ್ವಿಕ್ ಅವರ ತಾಯಿಯ ಅಚಾನಕ್ ಆಗಿ ಬದಲಾಗಿದ್ದ ಎಪಿಎಲ್ ಕಾರ್ಡನ್ನು ಬಿಪಿಎಲ್ ಗೆ ತಕ್ಷಣ ಬದಲಾಯಿಸಿ‌ಕೊಡಿ ಎಂದು ಸ್ಥಳದಲ್ಲೇ ಸೂಚಿಸಿದರು.

ಚಿಕಿತ್ಸೆ ಪಡೆಯುತ್ತಿರುವ ಎಲ್ಲ‌ಮಕ್ಕಳಿಗೆ ಶುಭಾಶಯ ಹೇಳಿ,  ಹೃದಯ ತುಂಬಿ ಹರಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಾರ್ಥಕ ಗೊಳಿಸಿದರು.

ಕಿದ್ವಾಯಿಗೆ ಆಸ್ಪತ್ರೆಗೆ ಆಗಮಿಸಿದವರೇ ಆವರಣದಲ್ಲಿ‌ ರೋಗಿಗಳನ್ನು ನೋಡಿಕೊಳ್ಳಲು ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ತಾಯಂದಿರ ಪಕ್ಕ ಕೂತು ಯೋಗ ಕ್ಷೇಮ ವಿಚಾರಿಸಿದರು.

ಎಲ್ಲಾ ಸೌಲಭ್ಯ ಕೊಡ್ತಾ ಇದ್ದಾರ? ಹಣ ಏನಾದರು ಕೇಳ್ತಾರ? ಅಂತ ವಿಚಾರಿಸಿ. ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

 

 


Share this with Friends

Related Post