ಕೊಲ್ಲೂರು (ಉಡುಪಿ): ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ರಾಜ್ಯದ ಎನ್ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಶೀಘ್ರವೇ ಪರಸ್ಪರ ಚರ್ಚಿಸಿ, ಸಮರ್ಥ ಹಾಗೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ಕುಟುಂಬ ಸಮೇತ ತಾಯಿ ಮೂಕಾಂಬಿಕೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಮೈತ್ರಿಯಲ್ಲಿ ಬಿರುಕು ಮೂಡಿಸುವ ಕಾಂಗ್ರೆಸ್ ನಾಯಕರ ಕನಸು ನನಸಾಗುವುದಿಲ್ಲ. ರಾಜ್ಯದ ಹಿತಕ್ಕಾಗಿ ಎರಡೂ ಪಕ್ಷಗಳು ಅತ್ಯುತ್ತಮ ಸಮನ್ವಯದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಹಿರಿಯೂರಿನಲ್ಲಿ ಒಗ್ಗಟ್ಟಿನಿಂದ ಎದುರಿಸಲಿದ್ದೇವೆ” ಎಂದು ಹೇಳಿದರು.
ಆರ್ಥಿಕ ದಿವಾಳಿತನ ಮತ್ತು ತೆರಿಗೆ ಹೊರೆ:
ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ ಕುಮಾರಸ್ವಾಮಿ, “ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ವಿಪರೀತ ಹೆಚ್ಚಿಸಿ ಸಾಮಾನ್ಯ ಜನರ ಮೇಲೆ ಹೊರೆ ಹೇರಲಾಗುತ್ತಿದೆ. ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಮಂಗಳೂರಿನ ಸಂಪುಟ ಸಭೆಯಲ್ಲಿ ₹32,000 ಕೋಟಿ ಯೋಜನೆಗಳನ್ನು ಘೋಷಿಸಿ ಕಣ್ಣೊರೆಸುವ ತಂತ್ರ ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು. ಬರ ಪರಿಹಾರದ ವಿಚಾರದಲ್ಲೂ ಕೇಂದ್ರಕ್ಕೆ ₹3,000 ಕೋಟಿಯಿಂದ ₹22,000 ಕೋಟಿವರೆಗೆ ಪದೇಪದೇ ಬದಲಾದ ಲೆಕ್ಕ ನೀಡಿ, ರೈತರಿಗೆ ಕೇವಲ ₹2,000 ಅಲ್ಪ ಪರಿಹಾರ ನೀಡಿ ಕೇಂದ್ರದತ್ತ ಬೊಟ್ಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ನಿಧಿ, ದೇಗುಲಗಳ ಹುಂಡಿ ಹಣದ ಮೇಲೆ ಕಣ್ಣು:
ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಸಚಿವರು, “ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹40,000 ಕೋಟಿ ಸೆಸ್ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳ ನಿರ್ವಹಣೆಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಮತ್ತು ಸಿಎಸ್ಆರ್ ನಿಧಿಯನ್ನು ಅವಲಂಬಿಸುವ ದುಸ್ಥಿತಿ ಬಂದಿದೆ. ಇತ್ತೀಚೆಗೆ ಹಾಸನಾಂಬ ದೇಗುಲದಲ್ಲಿ ₹29 ಕೋಟಿ ದಾಖಲೆ ಆದಾಯ ಸಂಗ್ರಹವಾಗಿದ್ದು, ಈಗ ಸರ್ಕಾರದ ಕಣ್ಣು ದೇವಸ್ಥಾನಗಳ ಹುಂಡಿ ಹಣದ ಮೇಲೂ ಬಿದ್ದಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸ್ಟಿಂಗ್ ಪ್ರಕರಣ ಮತ್ತು ಕಮಿಷನರ್ ವಿರುದ್ಧ ಆಕ್ರೋಶ:
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ದೆಹಲಿ ನಿವಾಸದಲ್ಲಿ ಆರೋಪಿಗೆ ಮೊಬೈಲ್ ಹಸ್ತಾಂತರವಾಗಿದೆ ಎಂಬ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. “ಕಮಿಷನರ್ ಒಬ್ಬ ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಮಾತನಾಡಿದ್ದಾರೆ. ಹುದ್ದೆ ಉಳಿಸಿಕೊಳ್ಳಲು ಅವರು ಯಾರ ಹಂಗಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ಈ ಪ್ರಕರಣ ಯಾರಿಗೆ ತಿರುಗುಬಾಣವಾಗಲಿದೆ ಎಂಬುದನ್ನು ಶೀಘ್ರವೇ ಬಯಲು ಮಾಡುತ್ತೇನೆ” ಎಂದರು. ‘ಇದು ಕೇವಲ ಟ್ರೇಲರ್’ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, “ನಾನು ಸಿನಿಮಾ ಮಾಡಿದವನು, ಇವರು ಈಗ ಶುರು ಮಾಡಿದ್ದಾರೆ. ಇವರ ಸಿನಿಮಾದ ಬಗ್ಗೆ ಮುಂದೆ ವಿವರವಾಗಿ ಹೇಳುತ್ತೇನೆ” ಎಂದರು.
ಮೂಕಾಂಬಿಕೆ ದರ್ಶನ:
ನಾಡಿಗೆ ಎದುರಾಗಿರುವ ಪ್ರಕೃತಿ ವಿಕೋಪ ಹಾಗೂ ಆಡಳಿತ ವೈಫಲ್ಯದ ಸಂಕಷ್ಟಗಳು ದೂರವಾಗಲಿ ಎಂದು ತಾಯಿ ಮೂಕಾಂಬಿಕೆಯಲ್ಲಿ ಪ್ರಾರ್ಥಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ, ಮೊಮ್ಮಗ ಅವ್ಯಾನ್ ದೇವ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

