Mon. Nov 16th, 2026

ಪಾರಂಪರಿಕ ಸೊಬಗು ಉಳಿಸಿಕೊಂಡು ʻಕುಮಾರಕೃಪ’ಕ್ಕೆ ಹೊಸ ರೂಪ: ನವೀಕೃತ ʻಗಂಗಾ’ ನಿವಾಸಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಗೃಹಪ್ರವೇಶ

Share this with Friends

ಬೆಂಗಳೂರು: ಬಳಕೆಯಿಲ್ಲದೆ ಉಳಿದಿದ್ದ ಕುಮಾರಕೃಪಾ ರಸ್ತೆಯ ಸರ್ಕಾರಿ ಅತಿಥಿ ಗೃಹವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಲಾಗಿದ್ದು, ಇದಕ್ಕೆ ʻಗಂಗಾʼ ಎಂದು ಮರುನಾಮಕರಣ ಮಾಡಲಾಗಿದೆ. ಸೋಮವಾರ ನೂತನ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧ್ಯುಕ್ತವಾಗಿ ಗೃಹಪ್ರವೇಶ ಮಾಡಿದ್ದಾರೆ.

ನದಿಗಳ ಹೆಸರಿನಲ್ಲಿ ಕೊಠಡಿಗಳು:

ಗೃಹಪ್ರವೇಶದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, “ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಅತ್ಯಂತ ಪವಿತ್ರ ಸ್ಥಾನ ಮತ್ತು ಗೌರವವಿದೆ. ಅದೇ ಆಶಯದೊಂದಿಗೆ ಈ ನಿವಾಸಕ್ಕೆ ʻಗಂಗಾʼ ಎಂದು ಹೆಸರಿಡಲಾಗಿದೆ. ಕಟ್ಟಡದ ಪ್ರತಿಯೊಂದು ಕೊಠಡಿಗೂ ಕಬಿನಿ, ಹೇಮಾವತಿ, ಶಿಂಷಾ ಹಾಗೂ ತುಂಗಭದ್ರಾ ಸೇರಿದಂತೆ ನಮ್ಮ ನಾಡಿನ ಜೀವನಾಡಿ ನದಿಗಳ ಹೆಸರನ್ನಿಡಲಾಗಿದೆ” ಎಂದು ವಿವರಿಸಿದ್ದಾರೆ. ಕರ್ನಾಟಕದ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ವಾಸ್ತವ್ಯ ಹೂಡಿದ್ದ ಈ ಐತಿಹಾಸಿಕ ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಕೇವಲ ಶೇ. 10ರಷ್ಟು ಮಾರ್ಪಾಡು ಮಾಡಿ ಹೊಸ ಮೆರುಗು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವೆಚ್ಚದ ಬಗ್ಗೆ ಸ್ಪಷ್ಟನೆ:

ನವೀಕರಣದ ವೆಚ್ಚದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಮೊದಲು ಹಂಚಿಕೆಯಾಗಿದ್ದ ನಿವಾಸ ಚಿಕ್ಕದಾಗಿದ್ದ ಕಾರಣ, ಖಾಲಿ ಇದ್ದ ಕುಮಾರಕೃಪ ಅತಿಥಿ ಗೃಹವನ್ನು ಅಧಿಕೃತ ನಿವಾಸವಾಗಿ ಮಾರ್ಪಡಿಸಿಕೊಳ್ಳಲಾಗಿದೆ. ಮುಂದಿನ ಮುಖ್ಯಮಂತ್ರಿಗಳಿಗೂ ಇದು ಅನುಕೂಲವಾಗಲಿದೆ. ಒಳಾಂಗಣಕ್ಕೆ ಕೇವಲ 60 ರಿಂದ 80 ರೂಪಾಯಿ ಮೌಲ್ಯದ ಕಡಿಮೆ ದರದ ಗ್ರಾನೈಟ್ ಬಳಸಲಾಗಿದೆ. ಅನಗತ್ಯ ಟೀಕೆಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಶೇ. 90ರಷ್ಟು ನನ್ನ ಸ್ವಂತ ಮನೆಯ ಪೀಠೋಪಕರಣಗಳು ಹಾಗೂ ಹಳೆಯ ಪೀಠೋಪಕರಣಗಳನ್ನೇ ಇರಿಸಿಕೊಳ್ಳಲಾಗಿದೆ. ಕೇವಲ ಭದ್ರತೆ ಮತ್ತು ರಸ್ತೆ ಸೌಕರ್ಯಗಳ ಅಭಿವೃದ್ಧಿಗಷ್ಟೇ ಹೆಚ್ಚಿನ ಹಣ ವ್ಯಯವಾಗಿದೆ” ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ:

ಜನಸೇವೆಗಾಗಿ ʻಗಂಗಾʼ ನಿವಾಸದ ಬಾಗಿಲು ಸದಾ ತೆರೆದಿರುತ್ತದೆ ಎಂದಿರುವ ಅವರು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು, ದಾಖಲೆಗಳನ್ನು ನಿರ್ವಹಿಸಲು ಹಾಗೂ ಸಭೆ-ಸಮಾರಂಭಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ʻಗಂಗಾ’ ನಿವಾಸದಲ್ಲಿ ಶಾಸಕರು ಮತ್ತು ಅಧಿಕಾರಿಗಳ ಸಭೆಗಳಿಗೆ ಅವಕಾಶವಿರಲಿದ್ದು, ಸಾರ್ವಜನಿಕರ ಭೇಟಿಗಾಗಿ ಪಕ್ಕದ ʻಕೃಷ್ಣಾ’ ನಿವಾಸದಲ್ಲಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ. ಇದಕ್ಕೆ ಒಂದೆರಡು ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಪಕ್ಷಗಳ ಟೀಕೆಗೆ ತಿರುಗೇಟು:

ಪಾರಂಪರಿಕ ಕಟ್ಟಡವನ್ನು ಬದಲಾಯಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಟೀಕೆ ಮಾಡುವುದು ವಿಪಕ್ಷಗಳ ಕರ್ತವ್ಯ. ಗುರುವಾರ ರಾಜ್ಯದ 224 ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನಿವಾಸಕ್ಕೆ ಆಹ್ವಾನಿಸುತ್ತಿದ್ದೇನೆ. ವಿಪಕ್ಷ ನಾಯಕರನ್ನೂ ಕರೆಯುತ್ತೇನೆ, ಅವರೇ ಬಂದು ವೀಕ್ಷಿಸಲಿ” ಎಂದರು. ಇದೇ ವೇಳೆ, ದೆಹಲಿಯಲ್ಲಿ ನಡೆಯಲಿರುವ ಪಕ್ಷದ ನಾಯಕರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸಾಗಿ ನೂತನ ನಿವಾಸದಲ್ಲಿ ವಾಸ್ತವ್ಯ ಹೂಡುವುದಾಗಿ ತಿಳಿಸಿದರು.

 


Share this with Friends

Related Post