Mon. Nov 16th, 2026

‘ಮುಖ್ಯಮಂತ್ರಿ ಸೇರಿ ನನ್ನ ಫೋನ್ ಕೂಡ ಕದ್ದಾಲಿಕೆಯಾಗುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

Share this with Friends

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. “ರಾಜ್ಯದ ಮುಖ್ಯಮಂತ್ರಿಗಳದ್ದು ಮಾತ್ರವಲ್ಲ, ಗೃಹ ಸಚಿವನಾಗಿರುವ ನನ್ನ ಫೋನ್ ಕೂಡ ಶೇ. 100ರಷ್ಟು ಕದ್ದಾಲಿಕೆಯಾಗುತ್ತದೆ” ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಪೆಗಾಸಸ್ ಸ್ಪೈವೇರ್ ಖರೀದಿ ಮತ್ತು ಅದರ ಬಳಕೆಯ ಮೂಲಕ ವಿರೋಧ ಪಕ್ಷಗಳ ನಾಯಕರನ್ನು ಬೆದರಿಸಿ, ನಿಯಂತ್ರಣದಲ್ಲಿಟ್ಟುಕೊಳ್ಳುವ ತಂತ್ರ ಇದಾಗಿದೆ. ಇದು ವಿಪಕ್ಷಗಳನ್ನು ಹತ್ತಿಕ್ಕಲು ಬಳಸುತ್ತಿರುವ ‘ಗುಜರಾತ್ ಮಾದರಿ’ಯ ಭಾಗವಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ವೈಫಲ್ಯ ಮುಚ್ಚಿಕೊಳ್ಳುವ ತಂತ್ರ:

ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಸಚಿವರು, “ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಚೀನಾ, ಪಾಕಿಸ್ತಾನದೊಂದಿಗಿನ ವಿದೇಶಾಂಗ ಸಂಬಂಧಗಳ ವೈಫಲ್ಯದ ಕುರಿತು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಸರ್ಕಾರದ ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಾಗೂ ಪ್ರಶ್ನಿಸುವವರ ಧ್ವನಿಯನ್ನು ಅಡಗಿಸಲು ಫೋನ್ ಕದ್ದಾಲಿಕೆಯಂತಹ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ” ಎಂದು ಕಿಡಿಕಾರಿದರು

‘ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿಯೇ?’: 

ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂಬ ವಿವಾದದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. “ಯಾರೋ ಒಬ್ಬರು ದೇವಸ್ಥಾನಕ್ಕೆ ಹೋದಾಗ ಬಾಗಿಲು ಹಾಕಿದ್ದರೆ ಅದು ಅಷ್ಟು ದೊಡ್ಡ ಸುದ್ದಿಯಾಗಬೇಕೇ? ಇದನ್ನು ಅನಗತ್ಯವಾಗಿ ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಈ ಬಗ್ಗೆ ಅಧಿಕೃತ ದೂರು ನೀಡಿದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ರಾಮನಗರದ ಘಟನೆಯ ಕುರಿತು ನನಗೆ ಪೂರ್ಣ ಮಾಹಿತಿ ಇಲ್ಲ. ದೇಗುಲಕ್ಕೆ ಯಾರು ಬೀಗ ಹಾಕಿಸುತ್ತಾರೆ ಎಂಬುದನ್ನು ಸರ್ಕಾರ ಕಾವಲು ಕಾಯಲು ಸಾಧ್ಯವಿಲ್ಲ. ಅಲ್ಲಿ ನಿಖಿಲ್ ಇದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಯಾಕೆ ಹೋಗಬೇಕು? ಉದ್ದೇಶಪೂರ್ವಕವಾಗಿ ಬೀಗ ಹಾಕಿದ್ದರೆ ಅದು ಖಂಡಿತಾ ತಪ್ಪು” ಎಂದರು.

ದಲಿತರ ದೇಗುಲ ಪ್ರವೇಶದ ಬಗ್ಗೆ ಪ್ರಶ್ನೆ:

ಇದೇ ವೇಳೆ ಸಮಾಜದ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, “ಇಂದಿಗೂ ರಾಜ್ಯದ ಅನೇಕ ಕಡೆಗಳಲ್ಲಿ ಪ್ರತಿನಿತ್ಯ ದಲಿತರಿಗೆ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. ಆದರೆ, ಅಂತಹ ಗಂಭೀರ ವಿಚಾರಗಳ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ ಅಥವಾ ಚರ್ಚಿಸುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

‘ಟ್ಯಾಲೆಂಟ್ ಎಲ್ಲಿದೆಯೋ ಅಲ್ಲಿಗೆ ಬಂಡವಾಳ ಹರಿದುಬರಲಿ’: 

ಪ್ರತಿಭೆ ಎಲ್ಲಿರುತ್ತದೆಯೋ ಅಲ್ಲಿಗೆ ಹೂಡಿಕೆ ಹೋಗಲಿ ಎಂದು ಹೇಳುವ ಮೂಲಕ ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನಿಂದ ಉದ್ಯಮಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವ ನೆರೆಯ ರಾಜ್ಯಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನವೆಂಬರ್ 17, 18 ಮತ್ತು 19ರಂದು ನಡೆಯಲಿರುವ 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ (BTS) ಕುರಿತು ಮಾತನಾಡಿದ ಅವರು, ಶೃಂಗಸಭೆಯ ಸಿದ್ಧತೆಗಳ ಬಗ್ಗೆ ವಿವರ ನೀಡಿದರು. “ಬೆಂಗಳೂರು ಟೆಕ್ ಸಮ್ಮಿಟ್ ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಜಾಗತಿಕ ಮಟ್ಟದ ನೀತಿ ನಿರೂಪಣೆಯ ವೇದಿಕೆಯಾಗಿದೆ. ಪ್ರತಿ ನವೆಂಬರ್‌ನಲ್ಲಿ ನಾವು ವಿಶ್ವದ ಅತ್ಯಂತ ದೊಡ್ಡ ತಂತ್ರಜ್ಞಾನ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ” ಎಂದು ಸಚಿವರು ತಿಳಿಸಿದರು.

ಕೃತಕ ಬುದ್ಧಿಮತ್ತೆ (AI) ಮತ್ತು ನವೋದ್ಯಮಗಳ ಸಂಗಮ:

ಈ ಬಾರಿಯ ಶೃಂಗಸಭೆಯಲ್ಲಿ ‘ಕೃತಕ ಬುದ್ಧಿಮತ್ತೆ’ (AI & Beyond) ಪ್ರಮುಖ ವಿಷಯವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಎಐ ಬಳಕೆಯ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಸಮಾವೇಶದಲ್ಲಿ 140ಕ್ಕೂ ಹೆಚ್ಚು ಜ್ಞಾನಾಧಾರಿತ ಗೋಷ್ಠಿಗಳು (Knowledge Sessions) ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 50 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ನವೋದ್ಯಮಗಳು (Startups) ನೋಂದಾಯಿಸಿಕೊಂಡಿದ್ದು, ‘ಜಸ್ಟ್ ಪೇ’ ಹಾಗೂ ‘ಸರ್ವಂ ಎಐ’ ಸಂಸ್ಥೆಗಳಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಶೃಂಗಸಭೆಯಲ್ಲಿ ‘ಫಿಸಿಕಲ್ ಆರ್ಟಿಫಿಷಿಯಲ್’ ವೇದಿಕೆ ನಿರ್ಮಿಸಲಾಗುತ್ತಿದ್ದು, ಎಐ ರೋಬೋಟ್‌ಗಳು ಮತ್ತು ಡ್ರೋನ್‌ಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು

 


Share this with Friends

Related Post