Mon. Nov 16th, 2026

ಹೊಸ ವರ್ಷದಿಂದ ಕಠಿಣ ಸಂಚಾರ ನಿಯಮ ಜಾರಿ: ಹಾಫ್ ಹೆಲ್ಮೆಟ್ ನಿಷೇಧ, ಫುಟ್‌ಪಾತ್ ಸವಾರಿಗೆ ₹5 ಸಾವಿರ ದಂಡ

Share this with Friends

ಬೆಂಗಳೂರು: ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಂಬರುವ ಹೊಸ ವರ್ಷದಿಂದ (2027) ರಾಜ್ಯಾದ್ಯಂತ ಅತ್ಯಂತ ಕಠಿಣ ಸಂಚಾರ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ಈ ಕುರಿತು ಸಮಗ್ರ ಮಾಹಿತಿ ನೀಡಿದರು.

ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ:

ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯಾದ್ಯಂತ ‘ಹಾಫ್ ಹೆಲ್ಮೆಟ್’ (Half Helmet) ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಮುಂದಾಗಿದೆ. ಹೊಸ ವರ್ಷದಿಂದ ಕಡ್ಡಾಯವಾಗಿ ಪೂರ್ಣ ಪ್ರಮಾಣದ (Full Face) ಐಎಸ್‌ಐ (ISI) ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿದರೆ ಭಾರೀ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಫುಟ್‌ಪಾತ್ ಮತ್ತು ಒನ್-ವೇ ಸವಾರಿಗೆ ದುಬಾರಿ ದಂಡ, ವಾಹನ ಜಪ್ತಿ:

ಪಾದಚಾರಿ ಮಾರ್ಗ (ಫುಟ್‌ಪಾತ್) ಹಾಗೂ ವಿರುದ್ಧ ದಿಕ್ಕಿನಲ್ಲಿ (ಒನ್-ವೇ) ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5,000 ದಂಡ, ಎರಡನೇ ಬಾರಿ ಉಲ್ಲಂಘಿಸಿದರೆ 10,000 ದಂಡ ವಿಧಿಸಲಾಗುವುದು. ಒಂದು ವೇಳೆ ಮೂರನೇ ಬಾರಿಯೂ ಅದೇ ತಪ್ಪನ್ನು ಪುನರಾವರ್ತಿಸಿದರೆ, ಸವಾರರ ವಾಹನವನ್ನೇ ಮುಟ್ಟುಗೋಲು (ಜಪ್ತಿ) ಹಾಕಿಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಓಲಾ, ಉಬರ್ ಸೇರಿ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಕಡ್ಡಾಯ:

ಮಳೆಗಾಲ ಹಾಗೂ ದಟ್ಟಣೆಯ ಸಮಯದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಕಂಪನಿಗಳು ಪ್ರಯಾಣಿಕರಿಂದ ಮನಬಂದಂತೆ ದುಬಾರಿ ದರ ವಸೂಲಿ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಹೊಸ ಕಾನೂನು ತರಲಾಗುತ್ತಿದೆ. ಓಲಾ, ಉಬರ್, ನಮ್ಮ ಯಾತ್ರಿ, ಏರ್‌ಪೋರ್ಟ್ ಟ್ಯಾಕ್ಸಿ ಹಾಗೂ ಗ್ರೀನ್ ಎಸ್‌ಎಂ ಸೇರಿದಂತೆ ರಾಜ್ಯದ ಎಲ್ಲಾ ಟ್ಯಾಕ್ಸಿಗಳಿಗೂ ಆಟೋರಿಕ್ಷಾಗಳ ಮಾದರಿಯಲ್ಲೇ ಡಿಜಿಟಲ್ ಮೀಟರ್ ಅಳವಡಿಸುವುದು ಕಡ್ಡಾಯವಾಗಲಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಸೇವೆ ನೀಡಬೇಕು. ಕಾನೂನು ಜಾರಿಯಾದ ಬಳಿಕ ವಿಶೇಷ ತಂಡಗಳನ್ನು ರಚಿಸಿ ದಿಢೀರ್ ತಪಾಸಣೆ ನಡೆಸಲಾಗುವುದು ಹಾಗೂ ಮೀಟರ್ ಇಲ್ಲದ ಟ್ಯಾಕ್ಸಿಗಳನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.

ಸಾರಿಗೆ ನೌಕರರ ವೇತನ ಬಾಕಿಗೆ 280 ಕೋಟಿ ಬಿಡುಗಡೆ:

ಇದೇ ವೇಳೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಬಾಕಿ ಪಾವತಿಗಾಗಿ ಸರ್ಕಾರ ಇದೀಗ 280 ಕೋಟಿ ಬಿಡುಗಡೆ ಮಾಡಿದೆ ಎಂದು ಭೈರತಿ ಸುರೇಶ್ ತಿಳಿಸಿದರು. ಒಟ್ಟು 1,200 ಕೋಟಿ ಬಾಕಿಯಲ್ಲಿ ಮೊದಲ ಕಂತಿನಲ್ಲಿ 450 ಕೋಟಿ, ಎರಡನೇ ಕಂತಿನಲ್ಲಿ 170 ಕೋಟಿ ನೀಡಲಾಗಿತ್ತು. ಇದೀಗ 280 ಕೋಟಿ ಸೇರಿ ಒಟ್ಟು 900 ಕೋಟಿ ಬಿಡುಗಡೆಯಾಗಿದ್ದು, ಉಳಿದ 300 ಕೋಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು

 


Share this with Friends

Related Post