ಬೆಂಗಳೂರು: ಐತಿಹಾಸಿಕ ಹಿನ್ನೆಲೆಯುಳ್ಳ ಸರ್ಕಾರಿ ಅತಿಥಿ ಗೃಹ ‘ಕುಮಾರಕೃಪ’ ಕಟ್ಟಡವನ್ನು ನವೀಕರಿಸಿ, ಅದಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಯನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರಿ ಬಂಗಲೆ ನವೀಕರಣ ಹಾಗೂ ಹೆಸರು ಬದಲಾವಣೆಯನ್ನು ಅಣಕಿಸಿ ಮಂಗಳವಾರ (ನ. 17) ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಫುಟ್ಪಾತ್ ಮೇಲೆ ಚಾಪೆ ಹಾಸಿ ಮಲಗುವ ಮೂಲಕ ವಿನೂತನ ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, “ಡಿ.ಕೆ. ಶಿವಕುಮಾರ್ ನನಗೆ ಬಹಳ ವರ್ಷಗಳ ಆತ್ಮೀಯ ಸ್ನೇಹಿತರು. ನಾನು ಅವರನ್ನು ಯಾವಾಗಲೂ ‘ಬಾಸ್’ ಎಂದೇ ಕರೆಯುತ್ತಿದ್ದೆ. ನನ್ನ ಬಗ್ಗೆ ಅವರಿಗೆ ಅಪಾರ ಗೌರವವಿದೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದಾಗಿ ಹೇಳಿಕಳಿಸಿದಾಗಲೂ ನಾನು ಅದನ್ನು ನಯವಾಗಿ ತಿರಸ್ಕರಿಸಿ, ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದಿದ್ದೆ. ನನಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಬಿಟ್ಟರೆ ಇನ್ಯಾರೂ ವಾಸವಿರದ ಐತಿಹಾಸಿಕ ಕುಮಾರಕೃಪ ಕಟ್ಟಡವನ್ನು ಒಡೆದು, ಹೆಸರು ಬದಲಾಯಿಸಿರುವುದು ಇತಿಹಾಸಕ್ಕೆ ಮಾಡಿದ ದೊಡ್ಡ ಅಪಚಾರ. ಯಾವುದೇ ಕಾರಣಕ್ಕೂ ಅದರ ಮೂಲ ಹೆಸರನ್ನು ಬದಲಾಯಿಸಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದರ್ಬಾರ್ ಮಾಡುವ ಮನಸ್ಥಿತಿ ಬಂದಿದೆ’:
ಶಿವಕುಮಾರ್ ಅವರ ಕಾರ್ಯವೈಖರಿ ವಿರುದ್ಧ ಹರಿಹಾಯ್ದ ವಾಟಾಳ್, “ಶಿವಕುಮಾರ್ ಅವರಿಗೆ ಸದಾಶಿವನಗರದಲ್ಲಿಯೇ ಅತ್ಯಂತ ದೊಡ್ಡದಾದ ಸ್ವಂತ ಮನೆಯಿದೆ. ಅವರು ಸರ್ಕಾರಿ ಬಂಗಲೆಗೆ ಹೋಗದೆ ಅಲ್ಲಿಯೇ ವಾಸವಿದ್ದಿದ್ದರೆ ನಾಡಿನ ಜನರ ದೃಷ್ಟಿಯಲ್ಲಿ ಬಹಳ ದೊಡ್ಡವರಾಗಿ ಕಾಣುತ್ತಿದ್ದರು. ಆದರೆ ಈಗ ಅವರಿಗೆ ‘ದರ್ಬಾರ್’ ಮಾಡುವ ಮನಸ್ಥಿತಿ ಬಂದಿದೆ. ಇಡೀ ರಾಜ್ಯದಲ್ಲಿ, ಉದಾಹರಣೆಗೆ ಚಾಮರಾಜನಗರವೊಂದರಲ್ಲೇ ಸುಮಾರು 50 ಸಾವಿರ ಜನರು ಸೋರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಬಡವರಿಗೆ ಸೂರು ಕಲ್ಪಿಸುವುದನ್ನು ಬಿಟ್ಟು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಬಂಗಲೆ ನವೀಕರಿಸಿಕೊಂಡು ಆರಾಮವಾಗಿರುವುದು ಸರಿಯಲ್ಲ. ಜನರ ಪರ ಧ್ವನಿ ಎತ್ತುವವರೇ ಇಲ್ಲದಂತಾಗಿದೆ” ಎಂದು ಕಿಡಿಕಾರಿದರು.
ಪೊಲೀಸ್ ಕಮಿಷನರ್ ವಿರುದ್ಧವೂ ಕಿಡಿ:
ಇದೇ ವೇಳೆ ಪೊಲೀಸ್ ಇಲಾಖೆ ಮತ್ತು ನಗರ ಪೊಲೀಸ್ ಕಮಿಷನರ್ ಕಾರ್ಯವೈಖರಿ ವಿರುದ್ಧವೂ ವಾಟಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಹಿರಿಯ ಹೋರಾಟಗಾರನಾದ ನನ್ನ ಮನೆಯ ಮುಂದೆ 40-50 ಪೊಲೀಸರು ಬಂದು, ನನ್ನ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಎಳೆದಾಡಿ ಜೀಪಿಗೆ ತುಂಬಿದರು. ಆದರೆ ಕಮಿಷನರ್ ಕಚೇರಿ ಮುಂದೆ ಸತ್ಯಾಗ್ರಹ ಮಾಡಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸದೆ, ಕಮಿಷನರ್ ಅವರೇ ಹೋಗಿ ಕೈಮುಗಿಯುತ್ತಾರೆ. ಹಿಂದೆ ಚಾಂಡಿ, ರಾಮಣ್ಣ, ಖಾದರ್ ಅಲಿ ಅವರಂತಹ ದಕ್ಷ ಕಮಿಷನರ್ಗಳು ಯಾರ ಹಂಗಿಗೂ ಒಳಗಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು” ಎಂದು ಟೀಕಿಸಿದರು.

